ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ವಿರೋಧ ಹಿನ್ನೆಲೆಯಲ್ಲಿ ‘ದಹಿ’ ಕೈಬಿಟ್ಟ ಎಫ್‌ಎಸ್‌ಎಸ್‌ಎಐ: ಆದೇಶ ಪರಿಷ್ಕರಣೆ

Last Updated 30 ಮಾರ್ಚ್ 2023, 11:22 IST
ಅಕ್ಷರ ಗಾತ್ರ

ನವದೆಹಲಿ: ಮೊಸರಿನ ಪೊಟ್ಟಣಗಳ ಮೇಲೆ ‘ದಹಿ’ ಎಂದು ಕಡ್ಡಾಯವಾಗಿ ಉಲ್ಲೇಖಿಸಲೇಬೇಕೆಂಬ ತನ್ನ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗುರುವಾರ ಪರಿಷ್ಕರಿಸಿದೆ. ಪ್ಯಾಕೆಟ್‌ಗಳ ಮುದ್ರಿತ ಲೇಬಲ್‌ಗಳಲ್ಲಿ ಇಂಗ್ಲಿಷ್‌ ಜತೆಗೆ, ಪ್ರಾದೇಶಿಕ ಭಾಷೆಯ ಹೆಸರು (ಮೊಸರು) ಉಲ್ಲೇಖಿಸಬಹುದು ಎಂದು ಹೇಳಿದೆ.

ರಾಜ್ಯಗಳ ಹಾಲು ಒಕ್ಕೂಟಗಳಿಗೆ ಎಫ್‌ಎಸ್‌ಎಸ್‌ಎಐ ಇತ್ತೀಚೆಗೆ ನೀಡಿದ್ದ ಸೂಚನೆ ತೀವ್ರ ಟೀಕೆಗೆ ಗುರಿಯಾಗಿತ್ತು. ಕರ್ನಾಟಕದಲ್ಲಿ ಕನ್ನಡ ಪರ ಹೋರಾಟಗಾರರು ಆದೇಶದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರೂ ಟ್ವೀಟ್‌ ಮಾಡಿ ಕಿಡಿ ಕಾರಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರಿಂದಲೂ ಅಸಮಾಧಾನ ವ್ಯಕ್ತವಾಗಿತ್ತು. ಎಫ್‌ಎಸ್‌ಎಸ್‌ಎಐನ ಈ ಆದೇಶವನ್ನು ಪಾಲಿಸುವುದಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಆದೇಶ ಪರಿಷ್ಕರಣೆಗೊಂಡಿದೆ. ಲೇಬಲ್‌ಗಳ ಮೇಲೆ ‘Curd’ ಎಂದು ಬಳಸಿ, ಆವರಣಗಳಲ್ಲಿ ಯಾವುದೇ ಇತರ ಪ್ರಚಲಿತ ಪ್ರಾದೇಶಿಕ ಹೆಸರನ್ನು ಉಲ್ಲೇಖಿಸಲು ಅನುಮತಿ ನೀಡಲಾಗಿದೆ. ಉದಾಹರಣೆಗೆ, 'Curd(ಮೊಸರು)', 'Curd (ತೈರ್‌)', 'Curd(ಪೆರುಗು)' 'Curd(ದಹಿ), Curd (ಜಮುತ್ ದೂದ್‌)..’ ಹೀಗೆ ಬಳಸಬಹುದು ಎಂದು ಎಫ್‌ಎಸ್‌ಎಸ್‌ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

'Curd' ಪದವನ್ನು ಕೈಬಿಟ್ಟು 'ದಹಿ' ಎಂಬ (ಹಿಂದಿ) ಪದವನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕಾಗಿ ಎಫ್‌ಎಸ್‌ಎಸ್‌ಎಐ ಇತ್ತೀಚೆಗೆ ಆದೇಶ ಹೊರಡಿಸಿತ್ತು.

‘ಆವಿನ್’ ಎಂಬ ಬ್ರಾಂಡ್‌ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಎಫ್‌ಎಸ್‌ಎಸ್‌ಎಐನ ನಿರ್ದೇಶನದಂತೆ ತನ್ನ ಮುದ್ರಿತ ಸ್ಯಾಚೆಟ್‌ಗಳಲ್ಲಿ 'ದಹಿ' ಎಂಬ ಹಿಂದಿ ಪದವನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ತಮಿಳಿನಲ್ಲಿ ಮಾತ್ರ ಉತ್ಪನ್ನದ ಹೆಸರು (ತೈರ್‌ ಎಂದು) ಉಲ್ಲೇಖಿಸುವುದಾಗಿ ಹೇಳಿತ್ತು.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಎಫ್‌ಎಸ್‌ಎಸ್‌ಎಐನ ಈ ಕ್ರಮವನ್ನು ‘ಹಿಂದಿ ಹೇರಿಕೆ’ ಪ್ರಯತ್ನ ಎಂದು ಖಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT