ಶುಕ್ರವಾರ, ಮೇ 20, 2022
19 °C
ಪಣಜಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಮನೋಹರ ಪರಿಕ್ಕರ್‌ ಮಗ ಸ್ಪರ್ಧೆ

ಗೋವಾ ಬಿಜೆಪಿ: 4 ಕ್ಷೇತ್ರಗಳಲ್ಲಿ ತಣಿಯದ ಬಂಡಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಗೋವಾ ವಿಧಾನಸಭೆಯ ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯವನ್ನು ಶಮನ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ, ನಾಲ್ಕು ಕ್ಷೇತ್ರಗಳಲ್ಲಿನ ಬಂಡಾಯ  ಮಾತ್ರ ಹಾಗೆಯೇ ಉಳಿದಿದೆ. ಅದರಲ್ಲಿ, ಪ್ರತಿಷ್ಠಿತ ಪಣಜಿ ಕ್ಷೇತ್ರವೂ ಒಂದು. 

ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರ ಮಗ ಉತ್ಪಲ್‌ ಪರಿಕ್ಕರ್‌ ಅವರು ಪಣಜಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಪಕ್ಷದ ಅಭ್ಯರ್ಥಿ ಅಂಟಾಸಿಯೊ ಮಾನ್ಸೆರಾಟ್‌ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅಂಟಾಸಿಯೊ ಅವರು 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 

ತಮ್ಮ ಮನಸ್ಸು ಇನ್ನೂ ಬಿಜೆಪಿಯಲ್ಲಿಯೇ ಇದೆ. ಆದರೆ, ತಮ್ಮ ತಂದೆ ಹಲವು ಬಾರಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ‘ಕೆಟ್ಟ ವ್ಯಕ್ತಿ’ ಗೆಲ್ಲುವುದನ್ನು ತಡೆಯುವುದೇ ತಮ್ಮ ಸ್ಪರ್ಧೆಯ ಗುರಿ ಎಂದು ಉತ್ಪಲ್ ಹೇಳಿದ್ದಾರೆ. ಅಂಟಾಸಿಯೊ ವಿರುದ್ಧ ಗಂಭೀರವಾದ ಹಲವು ಕ್ರಿಮಿನಲ್‌ ಪ್ರಕರಣಗಳು ಇವೆ. 

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಲಕ್ಷ್ಮಿಕಾಂತ್‌ ಪರ್ಸೇಕರ್‌ ಅವರು ಬಿಜೆಪಿ ತೊರೆದು ಮಾಂಡ್ರೆಮ್‌ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ದಯಾನಂದ ಸೊಪ್ತೆ ಅವರು ಈಗ ಇಲ್ಲಿ ಬಿಜೆಪಿ ಅಭ್ಯರ್ಥಿ. 2017ರಲ್ಲಿ ಈ ಕ್ಷೇತ್ರದಲ್ಲಿ ಪರ್ಸೇಕರ್ ಅವರನ್ನು ಸೊಪ್ತೆ ಸೋಲಿಸಿದ್ದರು. 

ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದ ಚಂದ್ರಕಾಂತ ಕವಲೇಕರ್‌ ಅವರ ಹೆಂಡತಿ ಸಾವಿತ್ರಿ ಕವಲೇಕರ್‌ ಅವರು ಸಂಗ್ಯೆಮ್‌ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಮಾಜಿ ಶಾಸಕ ಸುಭಾಷ್‌ ಫಲ್‌ದೇಸಾಯಿ ಅವರು ಇಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ.

ಸೆಂಗ್ಯೆಮ್‌ನ ಸಮೀಪದ ಕ್ಷೇತ್ರ ಕ್ಯೂಪೆಮ್‌ನಲ್ಲಿ ಚಂದ್ರಕಾಂತ ಕವಲೇಕರ್‌ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿ. ಪಕ್ಷೇತರ ಶಾಸಕರಾಗಿದ್ದ ಪ್ರಸಾದ್‌ ಗಾಂವ್ಕರ್ ಅವರು ಈ ಬಾರಿ ಇಲ್ಲಿಯ ಕಾಂಗ್ರೆಸ್‌ ಅಭ್ಯರ್ಥಿ. 

ಕೇಂದ್ರ ಸಚಿವ ಶ್ರೀಪಾದ ನಾಯಕ ಅವರ ಮಗ ಸಿದ್ದೇಶ್‌ ಅವರು ಕ್ಯುಂಭರುಜ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ದೊರೆಯದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿಯೂ ಅವರು ಹೇಳಿದ್ದರು. ಆದರೆ, ಅವರ ಮನವೊಲಿಸಲು ಬಿಜೆಪಿ ಯಶಸ್ವಿಯಾಗಿದೆ. ಶಾಸಕ ಪಾಂಡುರಂಗ ಮದಕೈಕರ್‌ ಅವರ ಹೆಂಡತಿ ಜೈನಿತಾ ಮದಕೈಕರ್‌ ಅವರು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ. ಆದರೆ, ಬಿಜೆಪಿಯಲ್ಲಿದ್ದ ರೋಹನ್‌ ಹರ್ಮಲ್ಕರ್‌ ಅವರು ಈ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು