ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ, ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿ ತೀಸ್ತಾ ಬಂಧನ: ಅಧಿಕಾರಿಗಳು

ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರಿಂದ ಬಂಧನ
Last Updated 26 ಜೂನ್ 2022, 14:12 IST
ಅಕ್ಷರ ಗಾತ್ರ

ಅಹಮದಾಬಾದ್: ‘ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧನ ಬಳಿಕ ತೀಸ್ತಾ ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಶನಿವಾರ ಮುಂಬೈನಲ್ಲಿ ತೀಸ್ತಾ ಅವರನ್ನು ವಶಕ್ಕೆ ಪಡೆದಿತ್ತು. ಬಳಿಕ ಅವರನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗಿತ್ತು.

‘ತೀಸ್ತಾ ಬಂಧನಕ್ಕೂ ಒಂದು ದಿನ ಮುನ್ನ ಗುಜರಾತ್‌ನ ಮಾಜಿ ಡಿಜಿಪಿ ಶ್ರೀಕುಮಾರ್ ಅವರನ್ನು ಅಹಮದಾಬಾದ್ ಅಪರಾಧ ವಿಭಾಗವು ಬಂಧಿಸಿತ್ತು. ಅವರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಕಸ್ಟಡಿಗೆ ವರ್ಗಾವಣೆ ವಾರಂಟ್ ಪಡೆಯುವ ಕಾರ್ಯವೂ ಪ್ರಕ್ರಿಯೆಯಲ್ಲಿದೆ’ ಎಂದೂ ಡಿಸಿಪಿ (ಅಪರಾಧ) ಚೈತನ್ಯ ಮಾಂಡ್ಲಿಕ್ ತಿಳಿಸಿದ್ದಾರೆ.

‘2002ರ ಕೋಮುಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತೀಸ್ತಾ, ಶ್ರೀಕುಮಾರ್ ಮತ್ತು ಭಟ್ ಅವರು ತನಿಖಾ ಆಯೋಗ, ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತು ನ್ಯಾಯಾಲಯಗಳಿಗೆ ಸಲ್ಲಿಸಿರುವ ದಾಖಲೆಗಳನ್ನು ತನಿಖೆಯ ಭಾಗವಾಗಿ ಅಪರಾಧ ವಿಭಾಗವು ಸಂಗ್ರಹಿಸಲಿದೆ’ ಎಂದೂ ಅವರು ಹೇಳಿದ್ದಾರೆ

‘ತೀಸ್ತಾ ಮತ್ತು ಶ್ರೀಕುಮಾರ್‌ ಅವರು ತನಿಖಾ ಅಧಿಕಾರಿಗಳೊಂದಿಗೆ ಕೈಜೋಡಿಸಿ ಸಂಚು ರೂಪಿಸುವ ಮೂಲಕ ನಕಲಿ ದಾಖಲೆಗಳು, ಸಾಕ್ಷ್ಯಗಳನ್ನು ಸೃಷ್ಟಿಸಿ ಭಾರತೀಯ ಅಪರಾಧ ಸಂಹಿತೆಯಡಿ ಅಪರಾಧ ಕೃತ್ಯವೆಸಗಿದ್ದಾರೆ’ ಎಂದು ಅಹಮದಾಬಾದ್‌ ಅಪರಾಧ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಡಿ.ಬಿ. ಬರಾದ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಬಂಧಿಸಲಾಗಿದೆ.

2002ರ ಗೋಧ್ರಾ ನಂತರದ ದಂಗೆ ಪ್ರಕರಣಗಳಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿತ್ತು. ಕೋಮುಗಲಭೆಗಳ ಬಗ್ಗೆ ಗುಜರಾತ್ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿ ಆಧಾರರಹಿತ ತಪ್ಪು ಆರೋಪಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು. ಇದಾದ ಬಳಿಕ ಸೆಟಲ್‌ವಾಡ್‌, ಶ್ರೀಕುಮಾರ್ ಮತ್ತು ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ತಮ್ಮ ಬಂಧನವನ್ನು ತೀಸ್ತಾ ಅವರು ಕಾನೂನುಬಾಹಿರವೆಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಜೀವಕ್ಕೆ ಬೆದರಿಕೆಯೊಡ್ಡಲಾಗಿದೆ. ಗುಜರಾತ್ ಪೊಲೀಸರು ತಮ್ಮನ್ನು ಒರಟಾಗಿ ನಡೆಸಿಕೊಂಡಿದ್ದಾರೆ ಎಂದೂ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿಪಿ (ಅಪರಾಧ) ಚೈತನ್ಯ ಮಾಂಡ್ಲಿಕ್ ‘ತೀಸ್ತಾ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ದೂರು ಸಲ್ಲಿಸಲು ಮುಕ್ತರಾಗಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT