ಶುಕ್ರವಾರ, ಅಕ್ಟೋಬರ್ 23, 2020
22 °C

ಹಾಥರಸ್‌ ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಹೇಳಿಕೆಗೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಹಾಥರಸ್‌ನ ಯುವತಿ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿಕೆ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ನಮ್ಮ ಹೇಳಿಕೆಗಳನ್ನು ಬದಲಿಸುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಸಂತ್ರಸ್ತೆಯ ತಂದೆ ಆಗ್ರಹಿಸಿದ್ದಾರೆ.

ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ದೇಶದ ಹಲವೆಡೆ ಪ್ರತಿಭಟನೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಒತ್ತಾಯ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಹೇಳಿಕೆ ಬದಲಿಸುವಂತೆ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಸಂತ್ರಸ್ತೆಯ ತಂದೆಯನ್ನು ಮನವೊಲಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

‘ಯೋಚನೆ ಮಾಡಿ. ಮಾಧ್ಯಮದವರು 2–3 ದಿನ ಇರುತ್ತಾರೆ, ಹೋಗುತ್ತಾರೆ. ನಾವೇ ನಿಮ್ಮನ್ನು ನೋಡಿಕೊಳ್ಳಬೇಕು. ಹೇಳಿಕೆ ಬದಲಿಸಬೇಕೇ ಇಲ್ಲವೇ ಎಂಬುದನ್ನು ನೀವೇ ಯೋಚನೆ ಮಾಡಿ’ ಎಂದು ಅಧಿಕಾರಿಯೊಬ್ಬರು ಹೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂತ್ರಸ್ತೆಯ ತಂದೆಯನ್ನು ಅಧಿಕಾರಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಅವರ ಹಿಂದೆ ಮೂವರು ಪೊಲೀಸ್ ಸಿಬ್ಬಂದಿ ಇರುವುದು ವಿಡಿಯೊದಲ್ಲಿ ದಾಖಲಾಗಿದೆ.

ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸಂತ್ರಸ್ತೆಯ ತಂದೆ ಮನವಿ ಮಾಡಿಕೊಳ್ಳುತ್ತಿರುವ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಪೊಲೀಸರು ನಮ್ಮ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಖಾಲಿ ಕಾಗದದ ಮೇಲೆ ನನ್ನ ಸಹಿ ಮಾಡಿಸಿಕೊಂಡಿದ್ದಾರೆ’ ಎಂದು ಅವರು ವಿಡಿಯೊದಲ್ಲಿ ಆರೋಪಿಸಿದ್ದಾರೆ.

‘ಅತ್ಯಾಚಾರ ನಡೆದಿದೆ ಎಂದು ನೀಡಿರುವ ಹೇಳಿಕೆ ಬದಲಿ ಸುವಂತೆ ಒತ್ತಡ ಹೇರಲಾಗುತ್ತಿದೆ. ಉತ್ತರ ಪ್ರದೇಶ ಪೊಲೀಸರಿಗೆ ನಾಚಿಕೆ ಯಾಗಬೇಕು’ ಎಂದು ಟಿ.ವಿ. ನಿರೂಪಕ ತೆಹಸೀನ್ ಪೂನಾವಾಲ ಟ್ವೀಟ್ ಮಾಡಿದ್ದಾರೆ.

ಗಾಯಗಳಿಂದ ಸಾವು: ಪೊಲೀಸ್

‘ಹಾಥರಸ್‌ನ ಯುವತಿ ಅತ್ಯಾಚಾರದಿಂದ ಆದ ಗಾಯಗಳಿಂದ ಸಾವನ್ನಪ್ಪಿಲ್ಲ. ಅತ್ಯಾಚಾರ ನಡೆದಿದೆ ಎಂಬುದು ಶವಪರೀಕ್ಷೆಯಲ್ಲೂ ಸಾಬೀತಾಗಿಲ್ಲ. ಯುವತಿಯ ಕುತ್ತಿಗೆಯ ಬಳಿ ಗಾಯವಾಗಿತ್ತು. ಬೆನ್ನಿನ ಮೂಳೆ ಮುರಿದಿತ್ತು. ಆಕೆಗೆ ಹೃದಯಾಘಾತವಾಗಿತ್ತು. ರಕ್ತದ ಸೋಂಕು ಇತ್ತು. ಇವುಗಳಿಂದ ಯುವತಿ ಮೃತಪಟ್ಟಿದ್ದಾರೆ’ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.‌

‘ಈ ಘಟನೆಗೆ ಜಾತಿಯ ಬಣ್ಣ ಹಚ್ಚಲಾಗಿದೆ. ಶಾಂತಿಯನ್ನು ಕದಡುವ ಉದ್ದೇಶದಿಂದ ಸತ್ಯವನ್ನು ತಿರುಚಿ, ಅತ್ಯಾಚಾರ ಎಂದು ಬಿಂಬಿಸಲಾಗಿದೆ. ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಶವ ಸುಟ್ಟಿದ್ದೇಕೆ?’

ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸರು ಹೇಳಿದ ನಂತರ, ‘ಯುವತಿಯ ಶವವನ್ನು ಸುಟ್ಟಿದ್ದು ಏಕೆ’ ಎಂದು ವಿರೋಧ ಪಕ್ಷಗಳ ನಾಯಕರು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ಪ್ರಶ್ನೆ ಕೇಳಿದ್ದಾರೆ.

‘ತಡರಾತ್ರಿಯಲ್ಲಿ ಕುಟುಂಬದವರನ್ನೂ ಹತ್ತಿರ ಬಿಟ್ಟುಕೊಳ್ಳದೆ ಯುವತಿಯ ಶವವನ್ನು ಪೊಲೀಸರೇ ಸುಟ್ಟಿದ್ದು ಏಕೆ ಎಂಬುದು ಈಗ ಅರ್ಥವಾಗುತ್ತಿದೆ. ಪೊಲೀಸರು ಈಗ ಅತ್ಯಾಚಾರವೇ ನಡೆದಿಲ್ಲ ಎನ್ನುತ್ತಿದ್ದಾರೆ. ಅತ್ಯಾಚಾರ ನಡೆದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈಗ ಶವವೇ ಇಲ್ಲ’ ಎಂದು ಅಂಕಣಕಾರ್ತಿ ಸ್ವಾತಿ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು