ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಥರಸ್‌ ಅತ್ಯಾಚಾರ ಸಂತ್ರಸ್ತೆಯ ಮನೆಗೆ ಎಡಪಕ್ಷಗಳ ನಿಯೋಗ ಭೇಟಿ

ನ್ಯಾಯಾಂಗ ತನಿಖೆಗೆ ಒತ್ತಾಯ
Last Updated 7 ಅಕ್ಟೋಬರ್ 2020, 2:50 IST
ಅಕ್ಷರ ಗಾತ್ರ

ನವದೆಹಲಿ: ಸಿಪಿಐ ಹಾಗೂ ಸಿಪಿಎಂನ ಜಂಟಿ ನಿಯೋಗವೊಂದು ಮಂಗಳವಾರ ಹಾಥರಸ್‌ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದೆ.

ಮುಖಂಡರಾದ ಸೀತಾರಾಂ ಯೆಚೂರಿ, ಡಿ. ರಾಜಾ, ಬೃಂದಾ ಕಾರಟ್‌, ಅಮರ್‌ಜೀತ್‌ ಕೌರ್‌, ಹರಿಲಾಲ್‌ ಯಾದವ್‌ ಹಾಗೂ ಗಿರೀಶ್‌ ಶರ್ಮಾ ಅವರು ನಿಯೋಗದಲ್ಲಿದ್ದರು. ಘಟನೆಯ ಬಗ್ಗೆ ಸ್ವತಂತ್ರನ್ಯಾಯಾಂಗ ತನಿಖೆಯಾಗಬೇಕು ಎಂದು ನಿಯೋಗ ಒತ್ತಾಯಿಸಿದೆ.

‘ಹಾಥರಸ್‌ ಅತ್ಯಾಚಾರದಂಥ ಘಟನೆಗಳು 21ನೇ ಶತಮಾನದಲ್ಲಿ ಕಂಡು ಕೇಳರಿಯದಂಥವು. ಕುಟುಂಬದವರ ಒಪ್ಪಿಗೆ ಇಲ್ಲದೆಯೇ ಯುವತಿಯ ಅಂತ್ಯಸಂಸ್ಕಾರ ನಡೆಸಿರುವುದು ಸಂವಿಧಾನದತ್ತ ಅಧಿಕಾರಗಳ ಸ್ಪಷ್ಟ ಉಲ್ಲಂಘನೆ. ನಾವು ಬರಿಯ ಸಹಾನುಭೂತಿ ಪ್ರಕಟಿಸಲು ಬಂದಿಲ್ಲ. ನಮ್ಮ ಮಗಳು ಹಾಗೂ ದೇಶದ ಸಂವಿಧಾನದ ಪರವಾಗಿ ಹೋರಾಟ ಮಾಡುತ್ತೇವೆ’ ಎಂದು ಭೇಟಿಯ ಬಳಿಕ ಸೀತಾರಾಂ ಯೆಚೂರಿ ತಿಳಿಸಿದರು.

ಮುಖ್ಯಮಂತ್ರಿ ವಜಾಗೆ ಒತ್ತಾಯ: ‘ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುವ ಮೂಲಕ ಪ್ರಕರಣವನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಈ ಆರೋಪ ಮಾಡಿದ ಕಾಂಗ್ರೆಸ್‌ ಮುಖಂಡರಾದ ಸುಶ್ಮಿತಾ ದೇವ್‌, ರಜನಿ ಪಾಟೀಲ್‌ ಹಾಗೂ ಸುಪ್ರಿಯಾ ಶ್ರೀನಾಥ್‌, ‘ಹಾಥರಸ್‌ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಡಲು ಸಂಚು ರೂಪಿಸಿದ್ದಾರೆ. ಇವರೆಲ್ಲರನ್ನೂ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ನಟಿಗೆ ರಕ್ಷಣೆ, ಸಂತ್ರಸ್ತೆಗೇಕಿಲ್ಲ?: ‘ಮುಂಬೈಯ ನಟಿಯೊಬ್ಬರಿಗೆ ವೈ–ಪ್ಲಸ್‌ ಭದ್ರತೆಯನ್ನು ಒದಗಿಸುವ ಸರ್ಕಾರವು, ಅತ್ಯಾಚಾರಕ್ಕೆ ಒಳಗಾದ ದಲಿತ ಬಾಲಕಿಯ ಕುಟುಂಬಕ್ಕೆ ರಕ್ಷಣೆಯನ್ನೇಕೆ ನೀಡುತ್ತಿಲ್ಲ’ ಎಂದು ಶಿವಸೇನಾ ಪ್ರಶ್ನಿಸಿದೆ.

‘ಸಂತ್ರಸ್ತೆಯ ಕುಟುಂಬದವರು ಭಯದಲ್ಲೇ ಜೀವನ ನಡೆಸುತ್ತಿದ್ದಾರೆ. ಇವರಿಗೂ ವೈ–ಪ್ಲಸ್‌ ಭದ್ರತೆ ಒದಗಿಸುವುದರಲ್ಲಿ ತಪ್ಪೇನು? ಸಂತ್ರಸ್ತೆಯ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಸರ್ಕಾರವು ಈಗಾಗಲೇ ಸಾಕ್ಷ್ಯಗಳನ್ನು ನಾಶ ಮಾಡಿರುವಾಗ, ಸಿಬಿಐ ತನಿಖೆಯಿಂದ ಆಗುವುದಾದರೂ ಏನು’ ಎಂದು ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಲಾಗಿದೆ.

ತಪ್ಪು ಸರಿಪಡಿಸಿ: ಹಾಥರಸ್‌ ಘಟನೆಯ ಬಳಿಕ ಕೆಲವು ಶಕ್ತಿಗಳು ರಾಜ್ಯದಲ್ಲಿ ಜಾತಿ ಸಂಘರ್ಷ ಹುಟ್ಟುಹಾಕಲು ಶ್ರಮಿಸುತ್ತಿವೆ ಎಂಬ ಆದಿತ್ಯನಾಥ ಅವರ ಹೇಳಿಕೆಯನ್ನು ತಳ್ಳಿಹಾಕಿದ ಬಿಎಸ್‌ಪಿ ನಾಯಕಿ ಮಾಯಾವತಿ ಅವರು, ‘ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವ ಮೂಲಕ ಈಗಲೂ ತನ್ನ ತಪ್ಪನ್ನು ತಿದ್ದಿಕೊಳ್ಳಲು ಸರ್ಕಾರಕ್ಕೆ ಅವಕಾಶ ಇದೆ’ ಎಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಜಾತಿ ಸಂಘರ್ಷ ಸೃಷ್ಟಿಸುವ ಯತ್ನ, ದೇಶದ್ರೋಹ ಮುಂತಾದ ವಿವಿಧ ಆರೋಪಗಳ ಮೇಲೆ ರಾಜ್ಯದಾದ್ಯಂತ ಭಾನುವಾರ 19 ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.

ಬಾಲಕಿ ಸಾವು

ಕೆಲವು ದಿನಗಳ ಹಿಂದೆ ಸಂಬಂಧಿಕರಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದ್ದ, ಹಾಥರಸ್‌ ಜಿಲ್ಲೆಯ ಆರು ವರ್ಷ ವಯಸ್ಸಿನ ಬಾಲಕಿಯು ಸೋಮವಾರ ರಾತ್ರಿ ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಬಾಲಕಿಯನ್ನು ಅಲಿಗಡ ಜಿಲ್ಲೆಯ ಸಂಬಂಧಿಯೊಬ್ಬರ ಮನೆಯಲ್ಲಿ ಕೂಡಿಡಲಾಗಿತ್ತು. ಸಮಾಜಸೇವಾ ಸಂಸ್ಥೆಯೊಂದರ ದೂರಿನ ಆಧಾರದಲ್ಲಿ, ಸೆ.17ರಂದು ಪೊಲೀಸರು ಬಾಲಕಿಯನ್ನು ರಕ್ಷಿಸಿ, ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರಿಗೆ ಜೀವಾವಧಿ ಸಜೆ

ಜೈಪುರ:ರಾಜಸ್ಥಾನದ ಅಳ್ವಾರ್ ಜಿಲ್ಲೆಯ ವಿಶೇಷ ಕೋರ್ಟ್ ಮಂಗಳವಾರ 2019ರಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿತು.

ನಾಲ್ವರು ಸಹಜ ಸಾವು ಸಂಭವಿಸುವವರೆಗೂ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತು. ಇನ್ನೊಬ್ಬ ಆರೋಪಿಗೆ ಕೃತ್ಯದ ವಿಡಿಯೊ ಹಂಚಿಕೊಂಡಿದ್ದ ಅಪರಾಧಕ್ಕಾಗಿ ಐ.ಟಿ.ಕಾಯ್ದೆಯಡಿ ಐದು ವರ್ಷ ಸಜೆ ವಿಧಿಸಿತು.

2019ರ ಏಪ್ರಿಲ್‌ 26ರಂದು ಕೃತ್ಯ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT