ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಉದ್ಯಮಿ ಹಿರೇನ್‌ ಸಾವು ಪ್ರಕರಣ ಸಂಬಂಧ ಇಬ್ಬರ ಬಂಧನ

Last Updated 21 ಮಾರ್ಚ್ 2021, 10:30 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ಮನ್ಸುಖ್ ಹಿರೇನ್ ಅನುಮಾನಸ್ಪದವಾಗಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಇಬ್ಬರನ್ನು ಬಂಧಿಸಿದೆ.

ಶನಿವಾರ ತಡ ರಾತ್ರಿ ಪೊಲೀಸ್‌ ಕಾನ್‌ಸ್ಟೆಬಲ್‌ ವಿನಾಯಕ ಶಿಂಧೆ ಮತ್ತು ಬೂಕ್ಕಿ ನರೇಶ್‌ ಧರೆ ಎನ್ನುವವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಇಬ್ಬರನ್ನು ವಿಚಾರಣೆಗಾಗಿ ಎಟಿಎಸ್‌ ಪ್ರಧಾನ ಕಚೇರಿಗೆ ಕರೆಯಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಬಂಧಿಸಲಾಗಿದೆ.

ಲಖನ್‌ ಭಯ್ಯಾ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಶಿಂಧೆ ಅಪರಾಧಿ ಎಂದು ಸಾಬೀತಾಗಿದೆ. ಕಳೆದ ವರ್ಷ ಶಿಕ್ಷೆ ಅವಧಿಯ ರಜೆ (ಫರ್ಲೊ) ಪಡೆದು ಜೈಲಿನಿಂದ ಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನ್‍ಸುಖ್‍ ಹಿರೇನ್‍ ಅವರ ಶಂಕಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‍ಐಎ) ಶನಿವಾರ ಕೇಂದ್ರ ಗೃಹ ಸಚಿವಾಲಯ ವಹಿಸಿತ್ತು. ಇದೇ ದಿನವೇ ಇವರನ್ನು ಬಂಧಿಸಲಾಗಿದೆ. ಇದುವರೆಗೆ ಎಟಿಎಸ್‌ ಈ ಪ್ರಕರಣದ ತನಿಖೆ ಕೈಗೊಂಡಿತ್ತು.

‘ರಾಜ್ಯ ಎಟಿಎಸ್‌ ಇದುವರೆಗೆ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದೆ. ಹಿರೇನ್‌ ಕುಟುಂಬದ ಸದಸ್ಯರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಇಬ್ಬರ ಬಂಧನದಿಂದ ತನಿಖೆ ಮಹತ್ವದ ಹಂತಕ್ಕೆ ತಲುಪಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT