ಮಂಗಳವಾರ, ಅಕ್ಟೋಬರ್ 19, 2021
24 °C

ಕೋವಿಡ್ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ: ತನಿಖೆಗೆ ಹೈಕೋರ್ಟ್‌ ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ದಿನಾಂಕ ಮತ್ತು ಎರಡನೇ ಡೋಸ್‌ ಲಸಿಕೆ ಪಡೆದ ಸ್ಥಳದ ಹೆಸರು ತಪ್ಪಾಗಿ ನಮೂದಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿಗೆ ಕೇರಳ ಹೈಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್, ಕಿಡಿಗೇಡಿತನದಿಂದಾಗಿ ಪ್ರಮಾಣ ಪತ್ರದಲ್ಲಿ ತಪ್ಪುಗಳಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಮಾಣಪತ್ರದಲ್ಲಿ ನಮೂದಾಗಿರುವಂತೆ ಲಸಿಕೆಯ ಎರಡನೇ ಡೋಸ್‌ ಪಡೆದ ಸ್ಥಳ ಸರ್ಕಾರದ ಲಸಿಕಾ ಕೇಂದ್ರವಾಗಿದೆ. ಹಾಗಾಗಿ ಎರ್ನಾಕುಲಂನ ಜಿಲ್ಲಾ ವೈದ್ಯಕೀಯ ಅಧಿಕಾರಿಯವರು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

‘ಒಂದೊಮ್ಮೆ ಸಹಜವಾಗಿ ತಪ್ಪಾಗಿರುವುದು ಖಚಿತವಾದರೆ, ಆಗಿರುವ ತಪ್ಪನ್ನು ಸರಿಪಡಿಸಿ ಹೊಸ ಪ್ರಮಾಣ ಪತ್ರವನ್ನು ನೀಡಬಹುದು. ಆದರೆ, ಇದು ಕಿಡಿಗೇಡಿತನದಿಂದಾದ ತಪ್ಪು ಎಂದು ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು‘ ಎಂದು ನ್ಯಾಯಾಲಯ ಎಚ್ಚರಿಸಿದೆ. ಈ ಪ್ರಕರಣವನ್ನು ಒಂದು ವಾರದ ನಂತರ ನಡೆಯುವ ವಿಚಾರಣೆಗಳ ಪಟ್ಟಿಗೆ ಸೇರಿಸುವಂತೆ ಸೂಚಿಸಿದೆ.

‘ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿರುವ ವಿವರಗಳು ತಪ್ಪಾಗಿ ನಮೂದಾಗಿವೆ‘ ಎಂದು ಆರೋಪಿಸಿ ಕೆ.ಪಿ.ಜಾನ್ ಎಂಬುವವರು ವಕೀಲರಾದ ಸಿ ದಿಲೀಪ್ ಮತ್ತು ಅನುಷ್ಕಾ ವಿಜಯಕುಮಾರ್ ಅವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

‘ತಮ್ಮ ಕಕ್ಷಿದಾರರು ಮಾರ್ಚ್‌ನಲ್ಲಿ ಮೊದಲ ಡೋಸ್ ಮತ್ತು ಏಪ್ರಿಲ್‌ನಲ್ಲಿ ಎರಡನೇ ಡೋಸ್ ಕೋವಿಡ್‌ ಲಸಿಕೆ ಪಡೆದಿದ್ದರು. ಈ ಎರಡು ಡೋಸ್‌ ಲಸಿಕೆಯನ್ನು ಅಲುವದಲ್ಲಿರುವ ಲಸಿಕಾ ಕೇಂದ್ರದಿಂದ ಪಡೆದಿದ್ದಾರೆ. ಆದರೆ, ಪ್ರಮಾಣಪತ್ರದಲ್ಲಿರುವಂತೆ ಅವರೆಂದೂ ಲಸಿಕೆ ತೆಗೆದುಕೊಳ್ಳಲು ಎರ್ನಾಕಲಂಗೆ ಹೋಗಿಲ್ಲ‘ ಎಂದು ವಕೀಲ ವಿಜಯಕುಮಾರ್ ವಾದಿಸಿದರು.

ಲಸಿಕಾ ಪ್ರಮಾಣಪತ್ರದಲ್ಲಿಎರಡನೇ ಡೋಸನ್ನು ಎರ್ನಾಕುಲಂನಲ್ಲಿ ಜುಲೈನಲ್ಲಿ ತೆಗೆದುಕೊಂಡಿದ್ದಾಗಿ ನಮೂದಿಸಲಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು