ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ವಶದಲ್ಲಿರುವ ಭಾರತೀಯ ಕೈದಿಗಳ ಬಿಡುಗಡೆಗೆ ಒತ್ತಾಯ

ಜೈಲುಶಿಕ್ಷೆ ಪೂರೈಸಿರುವ 536 ಮೀನುಗಾರರು ಮತ್ತು ಮೂವರು ನಾಗರಿಕರು
Last Updated 1 ಜುಲೈ 2022, 14:03 IST
ಅಕ್ಷರ ಗಾತ್ರ

ನವದೆಹಲಿ: ‘ಪಾಕಿಸ್ತಾನದ ವಶದಲ್ಲಿರುವ ಈಗಾಗಲೇ ಜೈಲುಶಿಕ್ಷೆಯನ್ನು ಮುಗಿಸಿರುವ 536 ಭಾರತೀಯ ಮೀನುಗಾರರು ಹಾಗೂ ಮೂವರು ನಾಗರಿಕರನ್ನು ಬಿಡುಗಡೆ ಮಾಡಿ, ಸ್ವದೇಶಕ್ಕೆ ಹಿಂತಿರುಗಿಸಬೇಕು’ ಎಂದು ಭಾರತವು ಶುಕ್ರವಾರ ಪಾಕಿಸ್ತಾನವನ್ನು ಒತ್ತಾಯಿಸಿದೆ.

‘ಇದರ ಜತೆಗೆ ಪಾಕಿಸ್ತಾನದ ವಶದಲ್ಲಿರುವ ಮತ್ತು ಭಾರತೀಯರು ಎಂದು ನಂಬಲಾದ 105 ಮೀನುಗಾರರು ಮತ್ತು 20 ನಾಗರಿಕ ಕೈದಿಗಳಿಗೆ ತಕ್ಷಣವೇ ಕಾನ್ಸುಲರ್ ಪ್ರವೇಶವನ್ನು ಒದಗಿಸುವಂತೆ ಪಾಕಿಸ್ತಾನವನ್ನು ಕೇಳಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ತಿಳಿಸಿದೆ.

2008ರಲ್ಲಿ ನಡೆದ ಒಪ್ಪಂದದ ಪ್ರಕಾರ ಪ್ರತಿವರ್ಷ ಜನವರಿ 1 ಮತ್ತು ಜುಲೈ 1ರಂದು ಎರಡು ದೇಶಗಳು ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳುವ ಅಭ್ಯಾಸದ ಭಾಗವಾಗಿ ಭಾರತವು ಪಾಕಿಸ್ತಾನಕ್ಕೆ ಈ ಕೋರಿಕೆಯನ್ನು ಸಲ್ಲಿಸಿದೆ.

‘ಭಾರತವು ತನ್ನ ವಶದಲ್ಲಿರುವ ಪಾಕಿಸ್ತಾನದ 309 ನಾಗರಿಕ ಕೈದಿಗಳು ಹಾಗೂ 95 ಮೀನುಗಾರರನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ. ಅಂತೆಯೇ ಪಾಕಿಸ್ತಾನವು ತನ್ನ ವಶದಲ್ಲಿರುವ 49 ನಾಗರಿಕ ಕೈದಿಗಳು ಮತ್ತು 633 ಮೀನುಗಾರರನ್ನು ಹಸ್ತಾಂತರಿಸಿದೆ’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಭಾರತದ ವಶದಲ್ಲಿರುವ ಪಾಕಿಸ್ತಾನದ ರಾಷ್ಟ್ರೀಯತೆಯ ದೃಢೀಕರಣದ ಕೊರತೆಯಿಂದ ವಾಪಸಾತಿಗೆ ಬಾಕಿ ಉಳಿದಿರುವ ಮೀನುಗಾರರು ಸೇರಿದಂತೆ ಒಟ್ಟು 57 ಪಾಕಿಸ್ತಾನಿ ಕೈದಿಗಳ ರಾಷ್ಟ್ರೀಯತೆಯನ್ನು ಖಚಿತಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಭಾರತವು ಪಾಕಿಸ್ತಾನಕ್ಕೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT