ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಜೀವಿತಾವಧಿ ಏರಿಕೆ, ರಾಜ್ಯಗಳ ನಡುವೆ ಭಿನ್ನತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದಲ್ಲಿ 1990ರ ನಂತರ ಜೀವಿತಾವಧಿಯು ಸುಮಾರು 10 ವರ್ಷಗಳಷ್ಟು ಹೆಚ್ಚಿದೆ. ಆದರೆ, ಈ ಏರಿಕೆಯು ವಿವಿಧ ರಾಜ್ಯಗಳ ನಡುವೆ ಏಕರೂಪವಾಗಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. 286ಕ್ಕೂ ಹೆಚ್ಚು ಸಾವಿನ ಕಾರಣಗಳು, 369 ವಿವಿಧ ಕಾಯಿಲೆಗಳು, ಗಾಯಗಳಿಗೆ ಅನ್ವಯಿಸಿ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ಅಧ್ಯಯನ ನಡೆದಿದೆ.

ಲಾನ್ಸೆಂಟ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಭಾರತದಲ್ಲಿ ಜೀವಿತಾವಧಿಯು 1990ರಲ್ಲಿ ಸರಾಸರಿ 59.6 ವರ್ಷಗಳಿದ್ದರೆ, ಅದು 2019ರಲ್ಲಿ 70.8 ವರ್ಷಕ್ಕೆ ಏರಿದೆ. ಜೀವಿತಾವಧಿಯು ಕೇರಳದಲ್ಲಿ 77.3 ವರ್ಷವಾಗಿದ್ದರೆ, ಉತ್ತರ ಪ್ರದೇಶದಲ್ಲಿ ಅದು 66.9 ವರ್ಷವಾಗಿದೆ.

ಆದರೆ, ಗಾಂಧಿನಗರದಲ್ಲಿ ಇರುವ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಶ್ರೀನಿವಾಸ ಗೋಲಿ ಸೇರಿದಂತೆ ಆಧ್ಯಯನ ತಂಡದಲ್ಲಿದ್ದ ಸಂಶೋಧಕರ ಪ್ರಕಾರ,  ಭಾರತದಲ್ಲಿ ‘ಆರೋಗ್ಯಕರ ಜೀವಿತಾವಧಿ’ಯು ಏರಿಕೆ ಕಂಡಿಲ್ಲ. ಏಕೆಂದರೆ, ಜನರು ಅನಾರೋಗ್ಯ ಮತ್ತು ಅಂಗವಿಕಲತೆಯೊಂದಿಗೆ ಹೆಚ್ಚಿನ ವರ್ಷ ಜೀವಿಸುತ್ತಿದ್ದಾರೆ.

ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡದ ಅನುಸಾರ, ಜಾಗತಿಕವಾಗಿ ಪ್ರಸ್ತುತ ಗಂಭೀರ ಸ್ವರೂಪದ ಕಾಯಿಲೆಗಳು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಿರ್ವಹಣೆಯಲ್ಲಿನ ಲೋಪವು ಹೆಚ್ಚುತ್ತಿದೆ. ಅಧಿಕ ರಕ್ತದೊತ್ತಡ, ತಂಬಾಕು ಬಳಕೆ, ವಾಯು ಮಾಲಿನ್ಯ ಮತ್ತಿತರ ಅಂಶಗಳು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ   ಎದುರಿಸುವಂತೆ ಮಾಡುತ್ತಿವೆ.

'ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಗಮನಾರ್ಹ ಪ್ರಗತಿಯೆಂದರೆ ಸೋಂಕು ರೋಗಗಳ ಪ್ರಮಾಣ ಕುಸಿದಿರುವುದು, ಗಂಭೀರ ಸ್ವರೂಪದ ರೋಗಗಳು ಹೆಚ್ಚಿರುವುದು' ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಅಧ್ಯಯನ ವರದಿಯ ಸಹ ಲೇಖಕ ಅಲಿ ಮೊಕ್ತದ್ ಅವರು ಪ್ರತಿಕ್ರಿಯಿಸಿದರು.

ಭಾರತದಲ್ಲಿ ಹೆರಿಗೆ ಸಂದರ್ಭದಲ್ಲಿ ಸಾವಿನ ಸಂಖ್ಯೆ ಹೆಚ್ಚಿತ್ತು. ಈಗ ಕಡಿಮೆ ಆಗಿದೆ. ಹೃದಯ ಸಂಬಂಧಿ ರೋಗಗಳಿಗೆ ಸಂಬಂಧಿಸಿದಂತೆ ಐದನೇ ಸ್ಥಾನದಲ್ಲಿದ್ದ ಭಾರತ ಈಗ ಒಂದನೇ ಸ್ಥಾನದಲ್ಲಿದೆ. ಇನ್ನೊಂದೆಡೆ, ಕ್ಯಾನ್ಸರ್ ಪ್ರಮಾಣವೂ ಗಣನೀಯವಾಗಿ ಏರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೋವಿಡ್-19 ಜಗತ್ತಿನ ವಿವಿಧೆಡೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳು ಹೆಚ್ಚಲು ಕಾರಣವಾಗಿದೆ. ಇದಕ್ಕೆ ಪೂರಕವಾಗಿ ಬೊಜ್ಜು, ಅಧಿಕ ರಕ್ತದೊತ್ತಡ, ವಾಯುಮಾಲಿನ್ಯ 30 ವರ್ಷಗಳಲ್ಲಿ ಪೂರಕವಾಗಿ ಕಾರಣವಾಗಿದ್ದು, ಈಗ ಕೋವಿಡ್ ಸಂಬಂಧಿತ ಸಾವುಗಳ ಸಂಖ್ಯೆ ಏರಲು ಕಾರಣವಾಗುತ್ತಿವೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

30 ವರ್ಷಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳೆಂದರೆ ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ, ಪಾರ್ಶ್ವವಾಯು ಆಗಿವೆ. 

2019ರಲ್ಲಿ ಇದ್ದಂತೆ ಭಾರತದಲ್ಲಿ ಸಾವಿಗೆ ಕಾರಣವಾಗಿರುವ ಪ್ರಮುಖ ಐದು ಅಂಶಗಳು ವಾಯು ಮಾಲಿನ್ಯ (ಸುಮಾರು 16.7 ಲಕ್ಷ), ಅಧಿಕ ರಕ್ತದೊತ್ತಡ (ಸುಮಾರು 14.7 ಲಕ್ಷ), ತಂಬಾಕು ಬಳಕೆ (ಸುಮಾರು 12.3 ಲಕ್ಷ), ಆಹಾರಪಥ್ಯ ಇಲ್ಲದಿರುವುದು (11.8 ಲಕ್ಷ), ರಕ್ತದಲ್ಲಿ ಅಧಿಕ ಸಕ್ಕರೆ ಅಂಶ ಇರುವುದು (11.2 ಲಕ್ಷ) ಆಗಿವೆ ಎಂದು ಅವರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು