ಗುರುವಾರ , ನವೆಂಬರ್ 26, 2020
21 °C
ಸಂಚುಕೋರರು ಮತ್ತು ಪ್ರಮುಖರ ಹೆಸರುಗಳು ಇಲ್ಲ

ಮುಂಬೈ ದಾಳಿಕೋರರ ಪಾಕ್‌ ಪಟ್ಟಿಗೆ ಭಾರತ ತಿರಸ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಇಸ್ಲಾಮಾಬಾದ್‌: ಮುಂಬೈ ದಾಳಿಯಲ್ಲಿ ಭಾಗಿಯಾದವರ ಉಗ್ರರ ಪಟ್ಟಿಯನ್ನು ಪಾಕಿಸ್ತಾನ ಗುರುವಾರ ಮಾಡಿದೆ. ಆದರೆ ಈ ಪಟ್ಟಿಯನ್ನು ಭಾರತ ತಿರಸ್ಕರಿಸಿದೆ.

ದಾಳಿಯ ಸಂಚುಕೋರರು ಮತ್ತು ಪ್ರಮುಖರ ಹೆಸರುಗಳು ಪಟ್ಟಿಯಲ್ಲಿ ಇಲ್ಲ ಎಂದು ಭಾರತ ಹೇಳಿದೆ.

ಮುಂಬೈ ದಾಳಿ ಕುರಿತ ವಿಚಾರಣೆ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಒಡಂಬಡಿಕೆಯನ್ನು ಅನುಸರಿಸುವಾಗ ಪಾಕಿಸ್ತಾನ ಇಂತಹ ತಂತ್ರಗಳನ್ನು ಕೈಬಿಡಬೇಕು ಎಂದು ಭಾರತ ಪದೇ ಪದೇ ಹೇಳುತ್ತಲೇ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ್‌ ಅವರು ಪ್ರತಿಕ್ರಿಯಿಸಿದ್ದಾರೆ.

‘ಉಗ್ರರ ದಾಳಿ ಪೂರ್ವ ನಿಯೋಜಿತವಾಗಿತ್ತು. ಪಾಕಿಸ್ತಾನದಿಂದಲೇ ಸಂಚು ರೂಪಿಸಿ ಜಾರಿಗೊಳಿಸಲಾಗಿತ್ತು. ಸಂಚುಕೋರರ ಎಲ್ಲಾ ಮಾಹಿತಿ ಮತ್ತು ಸಾಕ್ಷ್ಯಗಳು ಆ ರಾಷ್ಟ್ರದ ನೆಲವನ್ನೇ ಆಧರಿಸಿವೆ ಎಂಬುದನ್ನು ಪಾಕ್‌ ಬಿಡುಗಡೆ ಮಾಡಿರುವ ಪಟ್ಟಿ ಸಾಬೀತು ಪಡಿಸುತ್ತದೆ’ ಎಂದು ಶ್ರೀವಾಸ್ತವ್‌ ಹೇಳಿದ್ದಾರೆ.

ಇದನ್ನೂ ಓದಿ: 

‘ಪಾಕಿಸ್ತಾನದ ಪಟ್ಟಿಯಲ್ಲಿ ಎಲ್‌ಇಟಿಯ ಕೆಲವು ಸದಸ್ಯರ ಹೆಸರು ಇದೆ. ಇದರಲ್ಲಿ ದಾಳಿಗೆ ಬಳಸಿದ ಹಡಗಿನ ಸಿಬ್ಬಂದಿಯ ಹೆಸರು ಇದೆ. ಆದರೆ ಬೇಕಂತಲೇ ದಾಳಿ ಸಂಚುಕೋರರ ಹೆಸರನ್ನು ಕೈಬಿಡಲಾಗಿದೆ‘ ಎಂದು ಅವರು ಹೇಳಿದ್ದಾರೆ.

ವರದಿಗಳ ಪ್ರಕಾರ ಪಾಕಿಸ್ತಾನವು 1,210 ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಯನ್ನು  ಬಿಡುಗಡೆ ಮಾಡಿದ್ದು, ಇದರಲ್ಲಿ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾದ ‌19 ಉಗ್ರರ ಹೆಸರೂ ಇದೆ.

ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ದಳ ಫೆಡರಲ್‌ ತನಿಖಾ ಏಜೆನ್ಸಿಯು(ಎಫ್‌ಐಎ) ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಲಂಡನ್ ಮೂಲದ ಮುತ್ತಾಹಿದಾ ಕೌಮಿ ಮೂವ್‌ಮೆಂಟ್ (ಎಂಕ್ಯೂಎಂ) ನಾಯಕ ಅಲ್ತಾಫ್ ಹುಸೇನ್ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಕಾರ್ಯಕರ್ತ ನಾಸೀರ್‌ ಬಟ್‌ ಹೆಸರು ಇದೆ.

ಮುಹಮ್ಮದ್‌ ಅಮ್ಜದ್‌ ಖಾನ್‌ ಸೇರಿದಂತೆ ದಾಳಿಗೆ ಸಂಬಂಧಿಸಿದ 19 ಉಗ್ರರ ಹೆಸರು ಮತ್ತು ವಿಳಾಸವನ್ನು ಪಟ್ಟಿಯಲ್ಲಿ ನಮೂದಿಸಲಾಗಿದೆ. ದಾಳಿಯಲ್ಲಿ ಬಳಸಲಾಗಿದ್ದ ಅಲ್‌ ಫೌಜ್‌ ಬೋಟ್‌ ಮತ್ತು ಯಮಹಾ ಬೋಟ್‌ ಎಂಜಿನ್‌, ಲೈಫ್‌ ಜಾಕೆಟ್‌ ಅನ್ನು ಮುಹಮ್ಮದ್‌ ಅಮ್ಜದ್‌ ಖಾನ್‌ ಕರಾಚಿಯಿಂದ ಖರೀದಿಸಿದ್ದನು.  ಇದನ್ನು ಭಾರತೀಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 28 ಮಂದಿ ವಿದೇಶಿ ಪ್ರಜೆಗಳು ಸೇರಿ 166 ಮಂದಿ ಸಾವಿಗೀಡಾಗಿದ್ದರು.

ಈ ದಾಳಿ ನಡೆದು 12 ವರ್ಷಗಳಾಗಿವೆ. ಆದಾಗ್ಯೂ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಪಾಕಿಸ್ತಾನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಶ್ರೀವಾಸ್ತವ್‌ ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು