ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ವಿವೇಕ್‌ ರಾಮಸ್ವಾಮಿ?

Last Updated 14 ಫೆಬ್ರುವರಿ 2023, 13:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕದ ನಿವಾಸಿ, ಉದ್ಯಮಿ ವಿವೇಕ್‌ ರಾಮಸ್ವಾಮಿ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಚಿಂತನೆ ನಡೆಸಿದ್ದು ಈ ಬಗ್ಗೆ ಶೀಘ್ರವೇ ನಿಲುವು ಪ್ರಕಟಿಸುವ ಸಾಧ್ಯತೆ ಇದೆ.

37 ವರ್ಷದ ವಿವೇಕ್‌ ರಾಮಸ್ವಾಮಿ ಅವರು ಕೋಟ್ಯಧಿಪತಿ. ನ್ಯೂಯಾರ್ಕ್‌ ನಿಯತಕಾಲಿಕವು ಇವರನ್ನು ‘ಸಿಇಒ ಆಪ್‌ ಆ್ಯಂಟಿ ವೋಕ್‌ ಐಎನ್‌ಸಿ’ ಎಂದು ಬಣ್ಣಿಸಿತ್ತು. ಪ್ರಸ್ತುತ ಇವರು ಅಮೆರಿಕದ ಅಯೋವಾ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸ್ಪರ್ಧೆಗೆ ಪೂರ್ವಭಾವಿಯಾಗಿ ವಸ್ತುಸ್ಥಿತಿ ಅರಿಯುವ ಯತ್ನದಲ್ಲಿದ್ದಾರೆ.

ಅವರು ಈಗ ಅಧ್ಯಕ್ಷೀಯ ಸ್ಥಾನದ ಚುನಾವಣೆ ಕುರಿತು ಗಮನಹರಿಸಿದ್ದಾರೆ. ಸದ್ಯ ಉದ್ಯಮವನ್ನು ಮುನ್ನಡೆಸುವ ಅಗತ್ಯವನ್ನು ಅವರು ಕಾಣುತ್ತಿಲ್ಲ. ಬದಲಿಗೆ, ಅಮೆರಿಕನ್ನರ ಉತ್ಸಾಹ, ಸ್ಥಳೀಯ ಸಂಸ್ಕೃತಿ ಮರುಸ್ಥಾಪನೆಗೆ ಒತ್ತು ನೀಡುವ ಅಭಿಯಾನವನ್ನು ನಡೆಸಲು ಉತ್ಸುಕರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತದಿಂದ ವಲಸೆ ಹೋಗಿದ್ದ ದಂಪತಿ ಪುತ್ರರಾದ ವಿವೇಕ್ ಸಿನ್ಸಿನಾಟಿಯಲ್ಲಿ ಜನಿಸಿದ್ದು, ಹಾರ್ವರ್ಡ್ ಹಾಗೂ ಯಾಲೆ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪೂರೈಸಿದ್ದಾರೆ. ಪ್ರಸ್ತುತ ಅವರು, ₹414 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗೆ ಹಕ್ಕುದಾರರು. ಆರಂಭದಲ್ಲಿ ಬಯೊಟೆಕ್‌ ಕ್ಷೇತ್ರದಲ್ಲಿ ತೊಡಗಿದ್ದು, ಔಷಧ ಉತ್ಪಾದನೆಗೆ ಆದ್ಯತೆ ನೀಡಿದ್ದರು.

ನಾನು ಅಧ್ಯಕ್ಷ ಸ್ಥಾನದ ಸ್ಪರ್ಧಿ: ನಿಕ್ಕಿ ಹ್ಯಾಲೆ ಘೋಷಣೆ

ಚಾರ್ಲ್ಸ್‌ಟನ್‌, ಅಮೆರಿಕ (ಎ.ಪಿ): ಸೌತ್ ಕರೊಲಿನಾದ ಮಾಜಿ ಗವರ್ನರ್, ವಿಶ್ವಸಂಸ್ಥೆಯ ಮಾಜಿ ರಾಯಭಾರಿ, 51 ವರ್ಷದ ನಿಕ್ಕಿ ಹ್ಯಾಲೆ, ಅಮೆರಿಕದ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ತಾವು ಸ್ಪರ್ಧಿ ಎಂದು ಪ್ರಕಟಿಸಿದ್ದಾರೆ.

ಈ ಮೂಲಕ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ 2024ರಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಲು ಬಯಸಿರುವ 76 ವರ್ಷದ ಡೊನಾಲ್ಡ್ ಟ್ರಂಪ್ ಅವರಿಗೆ ಮೊದಲ ‌ಸ್ಪರ್ಧಿಯಾಗಿದ್ದಾರೆ.

ವಿಡಿಯೊ ಸಂದೇಶದಲ್ಲಿ ತಮ್ಮ ಸ್ಪರ್ಧೆಯನ್ನು ಪ್ರಕಟಿಸಿದರು. ಟ್ರಂಪ್ ನೇತೃತ್ವದ ಸಂಪುಟದಲ್ಲಿ ಅಧಿಕಾರಿಯಾಗಿದ್ದ ಅವರು, ತಾವು ಟ್ರಂಪ್‌ ಅವರಿಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಯಾಗುವುದಿಲ್ಲ ಎಂದು ಹಿಂದೆ ಹೇಳಿದ್ದರು.

ಆದರೆ, ಈಗ ಮನಸ್ಸು ಬದಲಾಯಿಸಿದ್ದಾರೆ. ದೇಶದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಹೊಸ ಪೀಳಿಗೆಯ ನಾಯಕತ್ವ ಅಗತ್ಯವಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT