ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಸ್‌’ ತೀವ್ರತೆ ಹೆಚ್ಚಳ ಸಾಧ್ಯತೆ

ಪಶ್ಚಿಮ ಬಂಗಾಳ, ಒಡಿಶಾ ಕರಾವಳಿಗೆ ಬುಧವಾರ ಚಂಡಮಾರುತ ಅಪ್ಪಳಿಸುವ ಮುನ್ನೆಚ್ಚರಿಕೆ
Last Updated 23 ಮೇ 2021, 21:01 IST
ಅಕ್ಷರ ಗಾತ್ರ

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಸೋಮವಾರದ ಹೊತ್ತಿಗೆ ತೀವ್ರ ಚಂಡಮಾರುತವಾಗಿ ರೂಪುಗೊಳ್ಳಲಿದೆ. ಇದಕ್ಕೆ ‘ಯಸ್‌’ ಎಂದು ಹೆಸರು ಇರಿಸಲಾಗಿದೆ. ಇದು ಬುಧವಾರ ಒಡಿಶಾ ಮತ್ತು ಪಶ್ಚಿಮ ಬಂಗಾಳವನ್ನು ಹಾದುಹೋಗಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.

ವಾಯುಭಾರ ಕುಸಿತ ಉತ್ತರ–ವಾಯವ್ಯ ದಿಕ್ಕಿಗೆ ಚಲಿಸುವ ನಿರೀಕ್ಷೆ ಇದೆ.ಸೋಮವಾರದ ನಂತರದ 24 ಗಂಟೆಗಳಲ್ಲಿ ಮತ್ತಷ್ಟು ಪ್ರಬಲವಾಗಿ ಬಂಗಾಳ ಕೊಲ್ಲಿಯ ಈಶಾನ್ಯ ದಿಕ್ಕಿಗೆ ಚಲಿಸಿ, ಬುಧವಾರ ಬೆಳಿಗ್ಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ತಲುಪಲಿದೆ. ಅದೇ ದಿನ ಸಂಜೆ ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳ ನಡುವಿನ ಪಾರಾದೀಪ್‌ ಮತ್ತು ಸಾಗರ್‌ ದ್ವೀಪಗಳನ್ನು ಹಾದುಹೋಗಲಿದೆ. ಈ ಚಂಡಮಾರುತದ ವೇಗ ಗಂಟೆಗೆ 155ರಿಂದ 165 ಕಿ.ಮೀ. ಇರಲಿದೆ. ಕೆಲವೊಮ್ಮೆ ಇದು ಗಂಟೆಗೆ 185 ಕಿ.ಮೀ.ಗೂ ಹೆಚ್ಚಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ತೀವ್ರಗೊಂಡ ಮುನ್ನೆಚ್ಚರಿಕಾ ಕ್ರಮಗಳು: ಈ ಚಂಡಮಾರುತದ ತೀವ್ರತೆ ಅಂದಾಜಿಸಿರುವುದಕ್ಕಿಂತ ಹೆಚ್ಚಿರುವ ಸಾಧ್ಯತೆ ಇದೆ. ಹಾನಿಯೂ ಹೆಚ್ಚಬಹುದು ಎಂದು ರಾಷ್ಟ್ರೀಯ ವಿಪತ್ತು ನಿವರ್ಹಣಾ ಪಡೆ (ಎನ್‌ಡಿಆರ್‌ಎಫ್‌) ಮುಖ್ಯಸ್ಥ ಎಸ್‌.ಎನ್‌. ಪ್ರಧಾನ್‌ ಹೇಳಿದ್ದಾರೆ. ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳಿಗೆ ಭಾರಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಇದು ಜೀವನ ಅಥವಾ ಮರಣದ ನಡುವಿನ ಆಯ್ಕೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸಿ, ಸ್ಥಳಾಂತರಕ್ಕೆ ಒಪ್ಪಿಸಬೇಕು ಎಂದು ಸಿಬ್ಬಂದಿಗೆ ಹೇಳಲಾಗಿದೆ.

ಕಡಿಮೆ ಅಪಾಯದ ಸ್ಥಳ ಎಂದು ಗುರುತಿಸಿರುವ ಪ್ರದೇಶಗಳ ಜನರನ್ನೂ ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಗದಿತ ಅವಧಿಗಿಂತ ಮುಂಚೆಯೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡುವುದರಿಂದ ಹಲವು ಜೀವ ಉಳಿಸಬಹುದು ಎಂದು ಪ್ರಧಾನ್‌ ಹೇಳಿದ್ದಾರೆ.

ತೌತೆ ಚಂಡಮಾರುತದ ಕಾರ್ಯಾಚರಣೆಗೆ ನಿಯೋಜಿತರಾಗಿದ್ದ ಎನ್‌ಡಿಆರ್‌ಎಫ್‌ ಸಿಬ್ಬಂದಿಗಳಲ್ಲಿ ಬಹುತೇಕರು ವಾಪಸ್ಸಾಗಿದ್ದಾರೆ. ಅವರಲ್ಲಿ ಕೆಲವರಿಗೆ ಕೊರೊನಾ ಸೋಂಕು ತಗುಲಿದೆ. ಪಶ್ಚಿಮ ಬಂಗಾಳದ ಕರಾವಳಿಯಲ್ಲಿ 12 ತಂಡಗಳನ್ನು ನಿಯೋಜಿಸಲಾಗಿದೆ. ಪ್ರತಿ ತಂಡದಲ್ಲೂ 47 ಸಿಬ್ಬಂದಿ ಇದ್ದಾರೆ ಎಂದು ಅವರು ಹೇಳಿದ್ದಾರೆ.

ನೆರವಿಗೆ ವಾಯುಪಡೆ ಸನ್ನದ್ಧ
ಚಂಡಮಾರುತದಿಂದ ಎದುರಾಗಬಹುದಾದ ಸಂಕಷ್ಟಗಳನ್ನು ಎದುರಿಸುವಲ್ಲಿ ಸರ್ಕಾರಗಳಿಗೆ ನೆರವಾಗಲು ವಾಯುಪಡೆ ಕೂಡ ಸನ್ನದ್ಧವಾಗಿದೆ. ವಾಯುಪಡೆಯ 11 ಸಾರಿಗೆ ವಿಮಾನಗಳು ಮತ್ತು 25 ಹೆಲಿಕಾಪ್ಟರ್‌ಗಳನ್ನು ತುರ್ತು ಪರಿಸ್ಥಿತಿಯಲ್ಲಿ ಜನರ ನೆರವಿಗೆ ಬಳಸಲು ನಿಯೋಜಿಸಲಾಗಿದೆ. ಶುಕ್ರವಾರದಿಂದಲೆ ವಾಯುಪಡೆಯು ಈ ದಿಸೆಯಲ್ಲಿ ಕೆಲಸ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಸಿ–130 ವಿಮಾನಗಳನ್ನು ಬಳಸಿ ಕೋಲ್ಕತ್ತ ಮತ್ತು ಪೋರ್ಟ್‌ಬ್ಲೇರ್‌ಗೆ 21 ಟನ್‌ ಪರಿಹಾರ ಸಾಮಾಗ್ರಿಗಳನ್ನು ಮತ್ತು 334 ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ರವಾನಿಸಿದೆ. ಈವರೆಗೂ ವಿವಿಧ ಸ್ಥಳಗಳಿಗೆ ಒಟ್ಟು 606 ಸಿಬ್ಬಂದಿ ಮತ್ತು 57 ಟನ್‌ ಸಾಮಾಗ್ರಿಗಳನ್ನು ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನೌಕಾಪಡೆಯು ಪ್ರವಾಹ ನಿರ್ವಹಣೆಯ ಎಂಟು ತಂಡಗಳು ಮತ್ತು ಮುಳುಗು ತಜ್ಞರ ನಾಲ್ಕು ತಂಡಗಳನ್ನು ಒಡಿಶಾ ಮತ್ತು ಪಶ್ವಿಮ ಬಂಗಳದಲ್ಲಿ ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿಯಿಂದ ಉನ್ನತ ಮಟ್ಟದ ಸಭೆ
ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿ, ರಾಜ್ಯ ಮತ್ತು ಕೇಂದ್ರೀಯ ಸಂಸ್ಥೆಗಳು ಚಂಡಮಾರುತದ ಪರಿಣಾಮ ಎದುರಿಸಲು ಮಾಡಿಕೊಂಡಿರುವ ತಯಾರಿ ಕುರಿತುಭಾನುವಾರ ಪರಿಶೀಲನೆ ನಡೆಸಿದರು. ಜೊತೆಗೆ, ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕೂಡಲೇ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ ಎಂದು ಪ್ರಧಾನಿ ಕಚೇರಿಯು ತಿಳಿಸಿದೆ.

ಹಾನಿಗೊಳಗಾದ ಪ್ರದೇಶಗಳಲ್ಲಿ ವಿದ್ಯುತ್‌ ಮತ್ತು ಸಂಪರ್ಕ ಜಾಲವನ್ನು ಕೂಡಲೇ ಪುನಃಸ್ಥಾಪಿಸಬೇಕು. ಚಂಡಮಾರುತದ ಕಾರಣ ಕೋವಿಡ್‌ ಚಿಕಿತ್ಸೆ ಮತ್ತು ಲಸಿಕೆ ಅಭಿಯಾನಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ರಾಜ್ಯ ಸರ್ಕಾರಗಳ ಜೊತೆ ಸೇರಿ ಕೆಲಸ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕೆಲಸಗಳಿಗೆ ಕರಾವಳಿಯ ಸ್ಥಳೀಯರು ಮತ್ತು ಉದ್ಯಮಗಳ ನೆರವು ಪಡೆಯಲೂ ಹೇಳಿದ್ದಾರೆ.ಕಳೆದ ವರ್ಷ ಪಶ್ಚಿಮ ಬಂಗಾಳ ಮತ್ತು ಒಡಿಶಾ ಪ್ರಬಲ ಆಂಫನ್ ಚಂಡಮಾರುತದಿಂದ ತತ್ತರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT