ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನಾಯಕರ ಹತ್ಯೆಗೆ ಐಎಸ್‌ ಉಗ್ರನಿಗೆ ಟೆಲಿಗ್ರಾಂನಲ್ಲಿ ತರಬೇತಿ

ರಷ್ಯಾದ ಫೆಡರಲ್‌ ಸೆಕ್ಯೂರಿಟಿ ಸರ್ವೀಸಸ್‌ನಿಂದ ಮಾಹಿತಿ
Last Updated 22 ಆಗಸ್ಟ್ 2022, 19:44 IST
ಅಕ್ಷರ ಗಾತ್ರ

ಮಾಸ್ಕೊ: ‘ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಭಾರತದ ನಾಯಕರ ಹತ್ಯೆಗೆ ನಿಯೋಜಿತನಾಗಿದ್ದ ಉಗ್ರನಿಗೆ ಇಸ್ಲಾಮಿಕ್‌ ಸ್ಟೇಟ್ ನಾಯಕರು ಟೆಲಿಗ್ರಾಂ ಮೆಸೆಂಜರ್ ಮೂಲಕ ತರಬೇತಿ ನೀಡಿದ್ದರು’ ಎಂದು ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸಸ್ (ಎಫ್ಎಸ್‌ಬಿ) ಹೇಳಿದೆ.

‘ಈಚಿನ ವರ್ಷಗಳಲ್ಲಿ ಉಗ್ರ ಸಂಘಟನೆಗಳು ನೇಮಕಾತಿ, ತರಬೇತಿ ಮತ್ತು ದಾಳಿ ನಿಯೋಜನೆ ಚಟುವಟಿಕೆಗಳನ್ನು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಸುತ್ತಿವೆ. ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಉಗ್ರರ ಆನ್‌ಲೈನ್‌ ಚಟುವಟಿಕೆಗಳು ಗರಿಷ್ಠ ಪ್ರಮಾಣದಲ್ಲಿವೆ. ಐಎಸ್‌ ಅನ್ನು ರಷ್ಯಾದಲ್ಲಿ ನಿಷೇಧಿಸಲಾಗಿದೆ. ಅದರ ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಣಿರಿಸಲಾಗಿದೆ. ಹೀಗಾಗಿಯೇ ಭಾರತದ ನಾಯಕರ ಹತ್ಯೆಗೆ ರೂಪಿಸಿದ್ದ ಯೋಜನೆಯನ್ನು ಪತ್ತೆ ಮಾಡಲು ಸಾಧ್ಯವಾಯಿತು’ ಎಂದುಎಫ್ಎಸ್‌ಬಿ ವಿವರಿಸಿದೆ.

‘ಈ ದಾಳಿಗೆ ನಿಯೋಜಿತನಾಗಿದ್ದ ಉಗ್ರನನ್ನು ಐಎಸ್‌ ‘ರಿಂಗ್‌ ಲೀಡರ್‌’ಗಳು ಇದೇ ಏಪ್ರಿಲ್‌ ಮತ್ತು ಜೂನ್‌ ಮಧ್ಯೆ ಸಂಪರ್ಕಿಸಿದ್ದಾರೆ. ತಮ್ಮ ಸಿದ್ಧಾಂತಗಳನ್ನು ಆತನಿಗೆ ಟೆಲಿಗ್ರಾಂ ಮೆಸೆಂಜರ್‌ ಆ್ಯಪ್‌ ಮೂಲಕ ಬೋಧಿಸಿದ್ದಾರೆ. ದಾಳಿ ಸಂಬಂಧ ಯೋಜನೆ ರೂಪಿಸಲು ಐಎಸ್‌ ರಿಂಗ್‌ ಲೀಡರ್‌ಗಳು ಆತನನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿ ಎರಡು ಬಾರಿ ಭೇಟಿ ಮಾಡಿದ್ದಾರೆ. ಈ ಮಾಹಿತಿಯನ್ನು ಬಂಧಿತನೇ ಬಹಿರಂಗಪಡಿಸಿದ್ದಾನೆ’ ಎಂದು ರಷ್ಯಾ ಹೇಳಿದೆ.

‘ಯೋಜನೆ ಸಿದ್ಧವಾದ ನಂತರ ಐಎಸ್‌ ಮುಖ್ಯಸ್ಥರು ಈ ಉಗ್ರನ ಜತೆಗೆ ಮಾತನಾಡಿದ್ದಾರೆ. ಆನಂತರ ಆತ ರಷ್ಯಾಕ್ಕೆ ಬಂದಿದ್ದಾನೆ. ಭಾರತಕ್ಕೆ ಹೋಗಲು ಅಗತ್ಯವಿದ್ದ ದಾಖಲೆಗಳನ್ನು ರಷ್ಯಾದಲ್ಲಿ ಹೊಂದಿಸಿಕೊಳ್ಳು
ವಂತೆ ಆತನಿಗೆ ಸೂಚನೆ ನೀಡಲಾಗಿತ್ತು. ಆನಂತರ ಭಾರತಕ್ಕೆ ತೆರಳಿ, ದಾಳಿಯನ್ನು ನಡೆಸಲು ಸೂಚಿಸಲಾಗಿತ್ತು’ ಎಂದು ಎಫ್‌ಎಸ್‌ಎಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಯಾವ ದೇಶದವನು?: ಬಂಧಿತ ಉಗ್ರ ಯಾವ ದೇಶದವನು ಎಂಬುದನ್ನು ರಷ್ಯಾ ಬಹಿರಂಗಪಡಿಸಿಲ್ಲ. ಆತ ಮಧ್ಯ ಏಷ್ಯಾದ ದೇಶದವನು ಎಂದಷ್ಟೇ ಹೇಳಿದೆ. ಆದರೆ, ಟರ್ಕಿಯ ಇಸ್ತಾಂಬುಲ್‌ನಲ್ಲಿ ಆತ ಐಎಸ್‌ ನಾಯಕರನ್ನು ಭೇಟಿ ಮಾಡಿದ್ದ ಎಂದು ಎಫ್‌ಎಸ್‌ಎಸ್‌ ಹೇಳಿದೆ. ಇದನ್ನು ಟರ್ಕಿ ಸರ್ಕಾರದ ಸುದ್ದಿ ಸಂಸ್ಥೆ ತಾಸ್‌ ಸಹ ದೃಢಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT