ಬೆಂಗಳೂರು : ಬಾಹ್ಯಾಕಾಶ ಕಾರ್ಯಕ್ರಮ ‘ಚಂದ್ರಯಾನ–3’ರ ರಾಕೆಟ್‌ನ ಕ್ರಯೋಜನಿಕ್ ಎಂಜಿನ್ (ಸಿಇ–200) ಕಾರ್ಯನಿರ್ಹವಣೆಗೆ ಸಂಬಂಧಿಸಿದ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಸಂಸ್ಥೆಯ ‘ಪ್ರೊಪಲ್ಷನ್ ಘಟಕ’ದಲ್ಲಿ ಈ ಪರೀಕ್ಷೆಯನ್ನು ನೆರವೇರಿಸಲಾಯಿತು. 25 ಸೆಕೆಂಡ್‌ಗಳ ಕಾಲ ನಡೆದ ಈ ಪರೀಕ್ಷೆ ಸಂದರ್ಭದಲ್ಲಿ, ನಿಗದಿಪಡಿಸಿದ್ದ ಮಾನದಂಡಗಳ ಪ್ರಕಾರವೇ ಎಂಜಿನ್ ಕಾರ್ಯನಿರ್ವಹಿಸಿದ್ದು ಕಂಡುಬಂತು ಎಂದು ಇಸ್ರೊ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಈ ಪರೀಕ್ಷೆಯು ಉದ್ದೇಶಿತ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ಮೈಲುಗಲ್ಲು’ ಎಂದು ಇಸ್ರೊ ಹೇಳಿದೆ.
‘ಮುಂದಿನ ಹಂತದಲ್ಲಿ, ಈ ಕ್ರಯೋಜನಿಕ್ ಎಂಜಿನ್ ಅನ್ನು ಉಡಾವಣಾ ವಾಹನದ ಪ್ರೊಪೆಲ್ಲಂಟ್ ಟ್ಯಾಂಕ್‌ಗಳು ಹಾಗೂ ಇತರ ಭಾಗಗಳೊಂದಿಗೆ ಸಂಯೋಜಿಸಲಾಗುವುದು’ ಎಂದೂ ತಿಳಿಸಿದೆ.
ವರ್ಷದ ಆರಂಭದಲ್ಲಿ, ಮಹೇಂದ್ರಗಿರಿಯಲ್ಲಿರುವ ಯು.ಆರ್.ರಾವ್ ಕೇಂದ್ರದಲ್ಲಿ ‘ಚಂದ್ರಯಾನ–3’ರ ಲ್ಯಾಂಡರ್‌ನ ವಿವಿಧ ಪರೀಕ್ಷೆಗಳನ್ನು ಸಹ ಯಶಸ್ವಿಯಾಗಿ ನೆರವೇರಿಸಲಾಗಿತ್ತು.
ಜೂನ್‌ನಲ್ಲಿ ಚಂದ್ರಯಾನ–3ರ ಗಗನನೌಕೆಯನ್ನು ಚಂದ್ರನತ್ತ ಕಳಿಸುವ ಉದ್ದೇಶವನ್ನು ಇಸ್ರೊ ಹೊಂದಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣಾ ವಾಹನ ‘ವೆಹಿಕಲ್ ಮಾರ್ಕ್ 3’ (ಎಲ್‌ವಿಎಂ3) ಬಳಸಿ ಗಗನನೌಕೆಯನ್ನು ಉಡ್ಡಯನ ಮಾಡಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.