ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ತೆರವು ತಡೆಗೆ ಕಂಗನಾ ಮಾಡಿದ್ದ ಮನವಿ ತಿರಸ್ಕೃತ: ಕೋರ್ಟ್‌ ನೀಡಿದ ಕಾರಣವೇನು?

Last Updated 2 ಜನವರಿ 2021, 1:45 IST
ಅಕ್ಷರ ಗಾತ್ರ

ಮುಂಬೈ: ಮೂರು ಫ್ಲ್ಯಾಟ್‌ಗಳನ್ನು ವಿಲೀನಗೊಳಿಸುವ ಮೂಲಕ ಮಂಜೂರಾದ ಯೋಜನೆಯನ್ನು ನಟಿ ಕಂಗನಾ ರನೌತ್ ಅವರು ಉಲ್ಲಂಘಿಸಿದ್ದಾರೆ ಎಂದು ಮುಂಬೈನ ದಿಂಡೊಶಿ ಉಪನಗರದ ನ್ಯಾಯಾಲಯ ಹೇಳಿದೆ.

ಬೃಹನ್‌ ಮುಂಬೈ ಆಡಳಿತವು ಕಟ್ಟಡ ತೆರವಿಗೆ ಮುಂದಾಗಿರುವುದಕ್ಕೆ ತಡೆ ನೀಡಬೇಕು ಎಂದು ಕಂಗನಾ ಸಲ್ಲಿಸಿದ್ದ ಮನವಿಯನ್ನು ಕಳೆದ ವಾರ ನ್ಯಾಯಾಲಯ ತಿರಸ್ಕರಿಸಿತ್ತು. ಇದೀಗ ನ್ಯಾಯಾಲಯದ ಆದೇಶದಲ್ಲಿ ಏನು ಹೇಳಲಾಗಿದೆ ಎಂಬ ವಿವರ ಲಭ್ಯವಾಗಿದೆ.

ಖಾರ್ ಪ್ರದೇಶದ 16 ಮಹಡಿಯ ಕಟ್ಟಡದ ಐದನೇ ಮಹಡಿಯಲ್ಲಿ ಕಂಗನಾ ಮೂರು ಫ್ಲ್ಯಾಟ್‌ಗಳನ್ನು ಹೊಂದಿದ್ದು, ಅವುಗಳನ್ನು ಒಂದಾಗಿ ವಿಲೀನಗೊಳಿಸಿದ್ದಾರೆ ಎಂದು ನ್ಯಾಯಾಧೀಶ ಎಲ್‌.ಎಸ್.ಚವಾಣ್ ಹೇಳಿದ್ದಾರೆ.

‘ಇದು ಮಂಜೂರಾದ ಯೋಜನೆಯ ಉಲ್ಲಂಘನೆ. ಯೋಜನೆ ಬದಲಾಯಿಸುವುದಿದ್ದರೆ ಅನುಮತಿ ಅಗತ್ಯ’ ಎಂದೂ ನ್ಯಾಯಾಲಯ ಹೇಳಿದೆ.

ಅನಧಿಕೃತ ಕಟ್ಟಡದ ಬಗ್ಗೆ ಉಲ್ಲೇಖಿಸಿ ಬೃಹನ್‌ ಮುಂಬೈ ಆಡಳಿತವು 2018ರ ಮಾರ್ಚ್‌ನಲ್ಲಿ ಕಂಗನಾಗೆ ನೋಟಿಸ್ ನೀಡಿತ್ತು. ಮಂಜೂರು ಮಾಡಿದ ಯೋಜನೆಯಂತೆಯೇ ಫ್ಲ್ಯಾಟ್‌ಗಳನ್ನು ಮರು ರೂಪಿಸುವಂತೆ ಮತ್ತೊಂದು ನೋಟಿಸ್ ನೀಡಲಾಗಿತ್ತು. ಇಲ್ಲವಾದಲ್ಲಿ ಕಟ್ಟಡ ನೆಲಸಮಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿತ್ತು. ಇದನ್ನು ಕಂಗನಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿತ್ತು.

ಡಿಸೆಂಬರ್ 23ರಂದು ನೀಡಿದ ಆದೇಶದಲ್ಲಿ, ಕಂಗನಾ ಮನವಿ ತಿರಸ್ಕರಿಸಿದ್ದ ನ್ಯಾಯಾಲಯವು, ಈ ವಿಚಾರದಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಅಗತ್ಯವಿಲ್ಲ ಎಂದಿತ್ತು. ಆದಾಗ್ಯೂ, ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಆರು ವಾರಗಳ ಕಾಲಾವಕಾಶ ನೀಡಿದೆ

ಸೆಪ್ಟೆಂಬರ್‌ 9ರಂದು ಬಾಂದ್ರಾದಲ್ಲಿರುವ ಕಂಗನಾ ಅವರ ಬಂಗಲೆಯ ಒಂದು ಭಾಗವನ್ನು ಬಿಎಂಸಿ ನೆಲಸಮಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಟಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬಳಿಕ, ಬಂಗಲೆಯ ಕೆಲಭಾಗವನ್ನು ಕೆಡವಿರುವ ಬೃಹನ್‌ ಮುಂಬೈ ಮಹಾನಗರಪಾಲಿಕೆಯ (ಬಿಎಂಸಿ) ಕ್ರಮ ದುರುದ್ದೇಶದಿಂದ ಕೂಡಿದೆ. ಇದರಿಂದ ಕಂಗನಾ ಅವರಿಗೆ ಗಣನೀಯ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT