ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ನಾವೀನ್ಯತಾ ಸೂಚ್ಯಂಕ: ಕರ್ನಾಟಕಕ್ಕೆ ಅಗ್ರಸ್ಥಾನ

2021ನೇ ಸಾಲಿನ ಸೂಚ್ಯಂಕ ಬಿಡುಗಡೆ ಮಾಡಿದ ನೀತಿ ಆಯೋಗ: ಸತತ ಮೂರನೇ ಬಾರಿ ರಾಜ್ಯಕ್ಕೆ ಅಗ್ರಪಟ್ಟ
Last Updated 21 ಜುಲೈ 2022, 15:56 IST
ಅಕ್ಷರ ಗಾತ್ರ

ನವದೆಹಲಿ: ನೀತಿ ಆಯೋಗ ಬಿಡುಗಡೆ ಮಾಡಿರುವ 2021ನೇ ಸಾಲಿನ ‘ಭಾರತ ನಾವೀನ್ಯತಾ ಸೂಚ್ಯಂಕ’ದಲ್ಲಿ ಕರ್ನಾಟಕವು ಅಗ್ರಸ್ಥಾನ ಪಡೆದಿದ್ದು, ಸತತ ಮೂರನೇ ವರ್ಷ ಈ ಸಾಧನೆ ಮಾಡಿದೆ.

ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರಪಟ್ಟ ಅಲಂಕರಿಸಿದೆ. ತೆಲಂಗಾಣ ಹಾಗೂ ಹರಿಯಾಣ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ.

ನೀತಿ ಆಯೋಗದ ಉಪಾಧ್ಯಕ್ಷ ಸುಮನ್‌ ಬೆರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರನ್‌ ಐಯ್ಯರ್‌ ಅವರು ಗುರುವಾರ ಸೂಚ್ಯಂಕ ಬಿಡುಗಡೆ ಮಾಡಿದರು.

ವಿದೇಶ ನೇರ ಬಂಡವಾಳ ಆಕರ್ಷಣೆ ಮತ್ತು ವೆಂಚರ್‌ ಕ್ಯಾಪಿಟಲ್‌ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಆಧಾರದಲ್ಲಿ ಕರ್ನಾಟಕವು ಸೂಚ್ಯಂಕದಲ್ಲಿ ಅಗ್ರಸ್ಥಾನಕ್ಕೆ ಏರುವಂತಾಗಿದೆ ಎಂದು ಅವರು ಹೇಳಿದರು.

‘ಪ್ರಮುಖ ರಾಜ್ಯಗಳು’, ‘ಈಶಾನ್ಯ ಮತ್ತು ಗುಡ್ಡಗಾಡು ಪ್ರದೇಶದ ರಾಜ್ಯಗಳು’ ಹಾಗೂ ‘ಕೇಂದ್ರಾಡಳಿತ ಮತ್ತು ನಗರ ರಾಜ್ಯಗಳು’ ಎಂಬ ವಿಭಾಗಗಳ ಅಡಿಯಲ್ಲಿ ಸೂಚ್ಯಂಕ ಸಿದ್ಧಪಡಿಸಲಾಗಿದೆ.

ಕರ್ನಾಟಕವು 18.01 ಅಂಕ ಗಳಿಸಿದರೆ, ತೆಲಂಗಾಣ ಮತ್ತು ಹರಿಯಾಣ ಕ್ರಮವಾಗಿ 17.66 ಮತ್ತು 16.35 ಅಂಕ ಪಡೆದಿವೆ. ಬಿಹಾರ, ಒಡಿಶಾ ಹಾಗೂ ಛತ್ತೀಸಗಡ ಕ್ರಮವಾಗಿ ಕೊನೆಯ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ. ಛತ್ತೀಸಗಡವು ಅತಿ ಕಡಿಮೆ (10.97) ಅಂಕ ಕಲೆಹಾಕಿದೆ. ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್‌, ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌ ಕೂಡ ಇದ್ದವು.

‘ವಿದೇಶಿ ನೇರ ಹೂಡಿಕೆ ಮತ್ತು ದೊಡ್ಡ ಮಟ್ಟದ ಬಂಡವಾಳ ಆಕರ್ಷಿಸುವಲ್ಲಿ ಕರ್ನಾಟಕವು ಇತರ 16 ರಾಜ್ಯಗಳನ್ನು ಹಿಂದಿಕ್ಕಿದೆ’ ಎಂದು ಸೂಚ್ಯಂಕದಲ್ಲಿ ತಿಳಿಸಲಾಗಿದೆ.

‘ಕೇಂದ್ರಾಡಳಿತ ಮತ್ತು ನಗರ ರಾಜ್ಯಗಳ ಪಟ್ಟಿಯಲ್ಲಿ ಚಂಡೀಗಡಕ್ಕೆ (27.88 ಅಂಕ) ಅಗ್ರಪಟ್ಟ ಒಲಿದಿದೆ. ನವದೆಹಲಿ (27.00) ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ (17.29) ನಂತರದ ಸ್ಥಾನಗಳಲ್ಲಿವೆ. ಪುದುಚೇರಿ, ಗೋವಾ, ಜಮ್ಮು ಮತ್ತು ಕಾಶ್ಮೀರ, ದಾದ್ರಾ–ನಗರ ಹವೇಲಿ ಮತ್ತು ಡಿಯು–ದಾಮನ್, ಲಕ್ಷದ್ವೀಪ ಹಾಗೂ ಲಡಾಖ್‌ ಕೂಡ ಈ ಪಟ್ಟಿಯಲ್ಲಿದ್ದವು.

ಈಶಾನ್ಯ ಮತ್ತು ಗುಡ್ಡಗಾಡು ಪ್ರದೇಶದ ರಾಜ್ಯಗಳ ಪಟ್ಟಿಯಲ್ಲಿ ಮಣಿಪುರ (19.37 ಅಂಕ) ಮೊದಲ ಸ್ಥಾನ ಪಡೆದಿದೆ. ಉತ್ತರಾಖಂಡ, ಮೇಘಾಲಯ, ಅರುಣಾಚಲಪ್ರದೇಶ, ಹಿಮಾಚಲಪ್ರದೇಶ, ಸಿಕ್ಕಿಂ, ಮಿಜೋರಾಂ, ತ್ರಿಪುರ, ಅಸ್ಸಾಂ ಮತ್ತು ನಾಗಾಲ್ಯಾಂಡ್‌ ಕ್ರಮವಾಗಿ ಎರಡರಿಂದ 10ನೇ ಸ್ಥಾನಗಳಲ್ಲಿವೆ.

ದೇಶದ ವಿವಿಧ ರಾಜ್ಯಗಳ ನಾವೀನ್ಯತಾ ಸಾಮರ್ಥ್ಯ ಪರೀಕ್ಷಿಸುವುದು, ಪರಿಸರ ವ್ಯವಸ್ಥೆ ಹಾಗೂ ಹೊಸತನವನ್ನು ಪ್ರೋತ್ಸಾಹಿಸುವುದು ಈ ಸೂಚ್ಯಂಕದ ಉದ್ದೇಶ. ಜಾಗತಿಕ ನಾವೀನ್ಯತಾ ಸೂಚ್ಯಂಕದ ಮಾದರಿಯಲ್ಲೇ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT