ಉತ್ತರಪ್ರದೇಶ ಚುನಾವಣೆ: ಶ್ರೀರಾಮನ ಆಶೀರ್ವಾದ ಕೋರಿದ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಹಾಗೂ ಸಂಪುಟದ ಸಚಿವರೊಂದಿಗೆ ಇಲ್ಲಿನ ತ್ಯಾಗರಾಜ್ ಸ್ಟೇಡಿಯಂನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯ ವೇದಿಕೆಯಲ್ಲಿ ದೀಪಾವಳಿ ಪೂಜೆ ಮಾಡಿದರು.
ಆಚಾರ್ಯ ಶ್ರೀಕಾಂತ ಶಾಸ್ತ್ರಿಗಳ ಶ್ಲೋಕಗಳ ಪಠಣದ ನಡುವೆ ಕೇಜ್ರಿವಾಲ್ ದಂಪತಿ ಧಾರ್ಮಿಕ ವಿಧಿಗಳನ್ನು ನಡೆಸಿದರು.
ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ನಾಯಕರು ಇತ್ತೀಚೆಗಷ್ಟೇ ಅಯೋಧ್ಯೆಗೆ ಭೇಟಿ ನೀಡಿದ್ದರು.
ಅಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದ ಕೇಜ್ರಿವಾಲ್ ಎಎಪಿಯು ಮೃದು ಹಿಂದುತ್ವದ ಒಲವು ತೋರುತ್ತಿರುವ ಕುರಿತು ಸೂಚ್ಯವಾಗಿ ಗಮನ ಸೆಳೆದಿದ್ದರು. ಅಲ್ಲದೇ, ದೆಹಲಿಯ ನಿವಾಸಿಗಳಿಗೆ ಉಚಿತ ತೀರ್ಥಯಾತ್ರೆ ಯೋಜನೆಯ ಭಾಗವಾಗಿ ಅಯೋಧ್ಯೆಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುವುದಾಗಿಯೂ ಘೋಷಿಸಿದ್ದರು.
ಇದೀಗ ದೆಹಲಿಯಲ್ಲಿ ದೀಪಾವಳಿಯ ದಿನದಂದು ರಾಮಮಂದಿರದ ವೇದಿಕೆಯಲ್ಲಿ ಅರವಿಂದ ಕೇಜ್ರಿವಾಲ್ ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿ, ರಾಮನ ಆಶೀರ್ವಾದ ಕೋರಿರುವುದು ಚುನಾವಣೆಯ ಪ್ರಚಾರದ ಭಾಗವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.