ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಸ್ಪರ್ಧೆಗೆ ಟಿಕೆಟ್ ಸಿಗದ ಕಾರಣ ತಲೆಗೂದಲು ಬೋಳಿಸಿಕೊಂಡ ಕಾಂಗ್ರೆಸ್ ನಾಯಕಿ

ವಿಧಾನಸಭಾ ಚುನಾವಣೆ
Last Updated 15 ಮಾರ್ಚ್ 2021, 2:21 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ದೊರೆಯದ ಕಾರಣ ಕೇರಳ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಲತಿಕಾ ಸುಭಾಷ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಇಲ್ಲಿನ ಕೇಂದ್ರ ಕಚೇರಿ ಎದುರು ತಮ್ಮ ತಲೆಯ ಕೂದಲನ್ನು ತೆಗೆಸಿಕೊಂಡು ಅವರು ಪ್ರತಿಭಟನೆ ನಡೆಸಿದ್ದಾರೆ.

ಏಪ್ರಿಲ್ 6ರಂದು ನಡೆಯುವ ಚುನಾವಣೆಗೆ ಕೇರಳ ಕಾಂಗ್ರೆಸ್‌ ಘಟಕವು 86 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಇದರಲ್ಲಿರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 9 ಮಾತ್ರ. ಲತಿಕಾ ಅವರು, ಏಟ್ಟುಮಾನೂರು ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಲತಿಕಾ ಅವರ ಹೆಸರು ಇಲ್ಲ. ಪಟ್ಟಿ ಬಿಡುಗೆಯಾದ ಕೆಲವೇ ಗಂಟೆಗಳಲ್ಲಿ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ಅಸಮಾಧಾನವಾಗಿದೆ. ಮಹಿಳೆಯರಿಗೆ ಶೇ 20ರಷ್ಟು ಸೀಟುಗಳನ್ನು ಕೇಳಿದ್ದೆವು. ಕನಿಷ್ಠಪಕ್ಷ ಪ್ರತಿ ಜಿಲ್ಲೆಯಲ್ಲಿ ಒಂದು ಕ್ಷೇತ್ರ ಮಹಿಳೆಯರಿಗೆ ನೀಡಿ ಎಂದು ಕೇಳಿದ್ದವು. ಆದರೆ ಪಕ್ಷಕ್ಕಾಗಿ ದುಡಿದ ಮಹಿಳೆಯರನ್ನು ಕಡೆಗಣಿಸಿ, ಬೇರೆಯವರಿಗೆ ಟಿಕೆಟ್ ನೀಡಲಾಗಿದೆ. ಒಂದು ಟಿಕೆಟ್ ಪಡೆಯಲೂ ಸಾಧ್ಯವಿಲ್ಲದ ಈ ಹುದ್ದೆಯಲ್ಲಿ ಇದ್ದು, ಏನು ಮಾಡುವುದು? ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಮಹಿಳೆಯರನ್ನು ಕಡೆಗಣಿಸಿದ್ದನ್ನು ಪ್ರತಿಭಟಿಸಿ, ತಲೆಯ ಕೂದಲು ತೆಗೆಸಿಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಚುನಾವಣಾ ಕಣದಲ್ಲಿ...

* ಡಿಎಂಕಿ ಹಾಲಿ ಶಾಸಕ ಸರವಣನ್ ಅವರು ಭಾನುವಾರ ಬಿಜೆಪಿ ಸೇರಿದ್ದಾರೆ. ‘ಜಿಲ್ಲಾಮಟ್ಟದ ಡಿಎಂಕೆ ಪದಾಧಿಕಾರಿಗಳು ಕಿರುಕುಳ ನೀಡುತ್ತಾರೆ. ಹೀಗಾಗಿ ಪಕ್ಷ ಬಿಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ಮಧುರೈ ಉತ್ತರ ಕ್ಷೇತ್ರದಿಂದ ಸರವಣನ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ

* ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿರುವ ಸಿಪಿಐ ತನ್ನ ಪಾಲಿನ ಆರು ಕ್ಷೇತ್ರಗಳಿಗೆ ಭಾನುವಾರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ

* ಅಸ್ಸಾಂ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿರುವ ರಾಯ್ಜೋರ್ ದಳದ ಅಧ್ಯಕ್ಷ ಅಖಿಲ್ ಗೊಗೊಯಿ ಅವರನ್ನು ಸ್ವರಾಜ್ ಇಂಡಿಯಾದ ಮುಂದಾಳು ಯೋಗೇಂದ್ರ ಯಾದವ್ ಅವರು ಭಾನುವಾರ ಭೇಟಿಯಾದರು. ರಾಯ್ಜೋರ್ ದಳ ಕಣಕ್ಕೆ ಇಳಿದಿರುವ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಬೇಕು ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

ಪುದುಚೇರಿ: ಕಾಂಗ್ರೆಸ್ ಪ್ರತಿಭಟನೆ
ಪುದುಚೇರಿ:
ಪುದುಚೇರಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಮಿತ್ರಪಕ್ಷ ಡಿಎಂಕೆಗೆ ಬಿಟ್ಟುಕೊಟ್ಟಿರುವುದಕ್ಕೆ ಪಕ್ಷದ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ಸೀಟು ಹಂಚಿಕೆ ಸಂಬಂಧ ಭಾನುವಾರ ನಡೆದ ವೀಕ್ಷಕರ ಸಭೆಯಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಯಿತು.

2016ರಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಷ್ಟೇ ಕಾಂಗ್ರೆಸ್ ಕಣಕ್ಕೆ ಇಳಿಯಲಿದೆ. ಡಿಎಂಕೆ 13 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ನ ಕೆಲವು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಇದನ್ನು ವಿರೋಧಿಸಿದ್ದಾರೆ. ಕಾಂಗ್ರೆಸ್‌ ಪ್ರಾಬಲ್ಯದ ಸೀಟುಗಳನ್ನುಡಿಎಂಕೆಗೆ ಬಿಟ್ಟುಕೊಟ್ಟ ಕಾರಣಕ್ಕೆ ಮತ್ತು ಹೆಚ್ಚಿನ ಸೀಟುಗಳನ್ನು ಬಿಟ್ಟುಕೊಟ್ಟದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT