ಶನಿವಾರ, ಮೇ 28, 2022
21 °C
ಸರ್ಕಾರಿ ನೌಕರನ ಹತ್ಯೆಗೆ ಖಂಡನೆ; ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಒತ್ತಾಯ

ಮುಂದುವರೆದ ಕಾಶ್ಮೀರಿ ಪಂಡಿತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರೊಬ್ಬರನ್ನು ಇತ್ತೀಚೆಗೆ ಉಗ್ರರು ಹತ್ಯೆಗೈದ ಘಟನೆ ಖಂಡಿಸಿ ಎರಡನೇ ದಿನವೂ ಕಾಶ್ಮೀರಿ ಪಂಡಿತ ಸರ್ಕಾರಿ ನೌಕರರು ಹಾಗೂ ಬಿಜೆಪಿ ಕಾರ್ಯಕರ್ತರು ಕಾಶ್ಮೀರದ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಕಾಶ್ಮೀರ ಕಣಿವೆಯಿಂದ ತಮ್ಮನ್ನು ಜಮ್ಮುವಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ವೀರ್‌ವಾನ್‌ ವಲಸೆ ಶಿಬಿರದಲ್ಲಿರುವ ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರು ಶನಿವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿ ನಡೆಯಿತು.

‘ರಾಹುಲ್ ಭಟ್ ಅವರ ಹತ್ಯೆಯ ನಂತರ ಕಾಶ್ಮೀರಿ ಪಂಡಿತ ನೌಕರರ ವಸತಿ ಶಿಬಿರಗಳಿಗೆ ಬೀಗ ಹಾಕಲಾಗಿದ್ದು,ಈ ನಿರ್ಬಂಧವನ್ನು ತೆರವುಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸರ್ಕಾರಿ ನೌಕರ ರಾಹುಲ್‌ ಭಟ್‌ ಹತ್ಯೆಕೋರರಿಗೆ ತಕ್ಕ ಶಿಕ್ಷೆ ನೀಡಬೇಕು ಹಾಗೂ ಕಾಶ್ಮೀರಿ ಪಂಡಿತ ಸಮುದಾಯದ ಜನರ ಭದ್ರತೆ ಹಾಗೂ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀನಗರದ ಜವಾಹರ್‌ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾಶ್ಮೀರಿ ಪಂಡಿತ ಸಮುದಾಯದ ಜನರು ಶುಕ್ರವಾರ (ಮೇ 13) ಬುಡ್ಗಾಂನ ಶೇಖ್‌ಪೋರಾದಿಂದ ಶ್ರೀನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಮೆರವಣಿಗೆ ಹೊರಟಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಆಶ್ರುವಾಯು ಶೆಲ್‌ ಸಿಡಿಸಿದ್ದರು.

ಮೇ 12ರಂದು ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್‌ ಕಚೇರಿಗೆ ನುಗ್ಗಿ ಕಂದಾಯ ಇಲಾಖೆ ನೌಕರ ರಾಹುಲ್‌ ಭಟ್‌ ಅವರನ್ನು ಇಬ್ಬರು ಪಾಕಿಸ್ತಾನಿ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು. ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ವಿವಿಧೆಡೆ ಪ್ರತಿಭಟನೆ ನಡೆದಿವೆ.

ರಾಹುಲ್‌ ಭಟ್‌ ಹತ್ಯೆಯಲ್ಲಿ ಭಾಗಿಯಾದ ಇಬ್ಬರು ಭಯೋತ್ಪಾದಕರನ್ನು ಶುಕ್ರವಾರ (ಮೇ 13) ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು