ಗುರುವಾರ , ಸೆಪ್ಟೆಂಬರ್ 29, 2022
26 °C
‌ಲಖಿಂಪುರ ಖೇರಿ ದಲಿತ ಸಹೋದರಿಯರ ಅತ್ಯಾಚಾರ, ಕೊಲೆ ಪ್ರಕರಣ: ತಂಗಿಯರ ಕಾಳಜಿ, ಕನಸನ್ನು ನೆನೆದ ಅಣ್ಣ

ಸೋದರಿಯರ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಪೊಲೀಸರ ಕಟ್ಟುಕಥೆ: ಬಾಲಕಿಯರ ಅಣ್ಣನ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಮುಜುಗರದಿಂದ ಪಾರಾಗಲು ಮತ್ತು ವೈಯಕ್ತಿಕ ಲಾಭಕ್ಕಾಗಿ ಪೊಲೀಸರು ಕಟ್ಟುಕಥೆ ಹೇಳುತ್ತಿದ್ದಾರೆ. ಇಬ್ಬರು ತಂಗಿಯರನ್ನು ಅಪಹರಿಸಿ, ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ’ ಎಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಇತ್ತೀಚೆಗೆ ಅತ್ಯಾಚಾರ ಮತ್ತು ಹತ್ಯೆಯಾದ ಇಬ್ಬರು ದಲಿತ ಬಾಲಕಿಯರ ಅಣ್ಣ ಆರೋಪಿಸಿದ್ದಾರೆ. 

ದಲಿತ ಸಹೋದರಿಯರ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ, ಶವಗಳನ್ನು ಕಬ್ಬಿನ ಗದ್ದೆಯಲ್ಲಿ ಮರಕ್ಕೆ ನೇಣು ಹಾಕಿದ್ದ ಪ್ರಕರಣ ನಡೆದಿತ್ತು. ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿತ್ತು. ಅತ್ಯಾಚಾರ, ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ, ಲಖಿಂಪುರ ಖೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜಿವ್ ಸುಮನ್, ‘ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿಯರಿಬ್ಬರೂ ಬುಧವಾರ ಮಧ್ಯಾಹ್ನ ತಮ್ಮ ಮನೆಯಿಂದ ಹೊರಟು, ಆರೋಪಿಗಳಾದ ಜುನೈದ್‌ ಮತ್ತು ಸೊಹೈಲ್ ಜತೆಗೆ ಹೋಗಿದ್ದಾರೆ. ಇಬ್ಬರು ಆರೋಪಿಗಳು ಬಾಲಕಿಯರೊಂದಿಗೆ ಸಂಬಂಧ ಹೊಂದಿದ್ದರು. ಮದುವೆಗೆ ಬಾಲಕಿಯರು ಒತ್ತಾಯಿಸಿದ್ದರಿಂದ ಆರೋಪಿಗಳು ಕತ್ತು ಹಿಸುಕಿ ಕೊಂದಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಹೇಳಿಕೆ ತಳ್ಳಿಹಾಕಿರುವ ಬಾಲಕಿಯರ ಅಣ್ಣ, ‘ಆರೋಪಿಗಳ ಪರಿಚಯ ನಮ್ಮ ಕುಟುಂಬಕ್ಕಿಲ್ಲ. ಅವರನ್ನು ನಾವು ಎಂದೂ ನೋಡಿಯೇ ಇಲ್ಲ. ತಂಗಿಯರ ಜೀವ ಅಪಾಯದಲ್ಲಿರುವ ಕಲ್ಪನೆಯೂ ಇರಲಿಲ್ಲ. ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು, ನಮಗೆ ನ್ಯಾಯ ಸಿಗಬೇಕು’ ಎಂದು ಒತ್ತಾಯಿಸಿದ್ದಾರೆ.

‘17 ವರ್ಷದ ತಂಗಿ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ, ಆರು ತಿಂಗಳ ಹಿಂದಷ್ಟೇ ಗರ್ಭಕೋಶದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ತಾಯಿಯನ್ನು ಕಾಳಜಿ ಮಾಡುತ್ತಿದ್ದಳು. 10ನೇ ತರಗತಿ ಓದುತ್ತಿದ್ದ 15 ವರ್ಷದ ಇನ್ನೊಬ್ಬ ತಂಗಿ ಶಿಕ್ಷಣ ಪೂರ್ಣಗೊಳಿಸಿ, ಉದ್ಯೋಗ ಪಡೆದು ಕುಟುಂಬಕ್ಕಾಗಿ ಸಂಪಾದಿಸುವ ಆಕಾಂಕ್ಷೆ ಹೊಂದಿದ್ದಳು. ಈಗ ಇಬ್ಬರನ್ನೂ ಕಳೆದುಕೊಂಡಿದ್ದೇನೆ’ ಎಂದು ಬಾಲಕಿಯರ ಅಣ್ಣ, ತನ್ನ ಸಹೋದರಿಯರ ಕಾಳಜಿ ಮತ್ತು ಆಕಾಂಕ್ಷೆಗಳನ್ನು ನೆನೆದು, ಕಣ್ಣೀರಾಗಿದ್ದಾರೆ.

ಬಾಲಕಿಯರ ಅಣ್ಣ ಹಿಮಾಚಲ ಪ್ರದೇಶದಲ್ಲಿ ಕಾರ್ಖಾನೆಯೊಂದರಲ್ಲಿ ನೌಕರಿಯಲ್ಲಿದ್ದು, ಕೆಲ ವರ್ಷಗಳ ಹಿಂದಷ್ಟೇ ದೆಹಲಿಗೆ ಸ್ಥಳಾಂತರಗೊಂಡಿದ್ದರು.

ಬಾಲಕಿಯರ ತಂದೆ, ಪೊಲೀಸ್‌ ತನಿಖೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರೂ, ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು, ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು