ಮಂಗಳವಾರ, ಮಾರ್ಚ್ 21, 2023
24 °C

ಬೆಳಗಾವಿ ಗಡಿ ಕದನಕ್ಕೆ ಸಜ್ಜಾದ ಮಹಾರಾಷ್ಟ್ರದ ಶಿಂಧೆ ಸರ್ಕಾರ: ಮೋದಿ, ಶಾ ಭೇಟಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡಣವೀಸ್ ಅವರನ್ನೊಳಗೊಂಡ ನಿಯೋಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಶೀಘ್ರದಲ್ಲೇ ಭೇಟಿಯಾಗಲಿದೆ ಎಂದು ತಿಳಿದು ಬಂದಿದೆ.

ಬೆಳಗಾವಿ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಇದೇ ನ.23ರಂದು ವಿಚಾರಣೆ ನಡೆಯಲಿದೆ. ಅದನ್ನು ಎದುರಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಭರದ ಸಿದ್ಧತೆ ನಡೆಸಿದ್ದಾರೆ.

ಈ ಬಗ್ಗೆ ಶಿಂಧೆ ಅವರು ಶನಿವಾರ ಗಡಿ ವಿವಾದದ ಉನ್ನತಾಧಿಕಾರ ಸಮಿತಿಯ ಸಭೆ ನಡೆಸಿದ್ದು, ಮಹಾರಾಷ್ಟ್ರದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಲು ನೇಮಕವಾಗಿರುವ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಸೇರಿದಂತೆ 19 ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸುಪ್ರೀಕೋರ್ಟ್‌ನಲ್ಲಿ ಗಡಿ ವಿವಾದದ ಬಗ್ಗೆ ವಿಚಾರಣೆಯನ್ನು ತ್ವರಿತಗೊಳಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಸಭೆ ನಿರ್ಧಾರ ತೆಗೆದುಕೊಂಡಿದೆ.

ಕಾನೂನು ಹೋರಾಟದ ಉಸ್ತುವಾರಿಗಾಗಿ ಹಿರಿಯ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರ ದ್ವಿಸದಸ್ಯ ಸಮಿತಿಯನ್ನು ಶಿಂಧೆ ರಚಿಸಿದ್ದಾರೆ. ಗಡಿಯಲ್ಲಿ ಮಹಾರಾಷ್ಟ್ರದ ಜನರ ಪರ ಮಹಾರಾಷ್ಟ್ರ ಸರ್ಕಾರ ಇದೆ ಎಂದು ಅವರು ಅಭಯ ನೀಡಿದ್ದಾರೆ.

ಅಲ್ಲದೇ ಗಡಿಯಲ್ಲಿ ಮಹಾರಾಷ್ಟ್ರದ ಜನರ ಪರ ಹಾಗೂ ಗಡಿ ವಿವಾದದ ಬಗ್ಗೆ ಅರಿವು ಮೂಡಿಸಲು ವಿಶೇಷ ಸೆಲ್ ಅನ್ನು ಬಲಪಡಿಸುವುದಾಗಿ ಸಿಎಂ ಶಿಂಧೆ ಘೋಷಣೆ ಮಾಡಿದ್ದಾರೆ. ನಮ್ಮ ಜನರ ಪರ ಕೆಲಸ ಮಾಡಲು ಕರ್ನಾಟಕ ರಾಜ್ಯದ ಜೊತೆ ಸಂವಹನ ನಡೆಸಿಲೂ ಸಿದ್ಧ ಎಂದು ಅವರು ತಿಳಿಸಿದ್ದಾರೆ.

ಎಂಇಎಸ್‌ಗೆ ಹಣಕಾಸಿನ ನೆರವು!

ಗಡಿ ವಿವಾದದಲ್ಲಿ ಮಡಿದ ಕುಟುಂಬದವರಿಗೆ ಪಿಂಚಣಿ ನೀಡುವ ನೆರವನ್ನು ನಮ್ಮ ಸರ್ಕಾರ ಮುಂದುವರೆಸಲಿದೆ ಎಂದು ಹೇಳಿರುವ ಮಹಾ ಸಿಎಂ, ಗಡಿ ವಿವಾದ ಮುನ್ನಡೆಸಲು ಬೆಳಗಾವಿಯ ಮಹಾರಾಷ್ಟ್ಟ ಏಕೀಕರಣ ಸಮಿತಿಗೆ (ಎಂಇಎಸ್) ಹಣಕಾಸಿನ ನೆರವು ನೀಡಲೂ ಸಿದ್ಧ ಎಂದು ಘೋಷಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ದೇವೇಂದ್ರ ಫಡಣವೀಸ್ ಅವರು, ‘ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದವನ್ನು ಪರಿಹರಿಸಲು ನಮ್ಮ ಸರ್ಕಾರ ಸಿದ್ಧವಿದ್ದು, ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಇದು ನಡೆಯಲಿದೆ’ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ಎಂ. ಶ್ರೀವಾತ್ಸವ ಕೂಡ ಹಾಜರಿದ್ದರು.

ಬೆಳಗಾವಿ, ಬೀದರ್, ಬಾಲ್ಕಿ ಸೇರಿದಂತೆ ಕರ್ನಾಟಕ ಗಡಿಯಲ್ಲಿರುವ 865 ಹಳ್ಳಿಗಳು ತಮಗೆ ಸೇರಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ವಾದಿಸುತ್ತಿದೆ. 1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಡೆಯಲಿದೆ.

ಕೂಡಲೇ ಸರ್ವಪಕ್ಷಗಳ ಸಭೆಗೆ ಸಿದ್ದರಾಮಯ್ಯ ಆಗ್ರಹ

‘ಬೆಳಗಾವಿ ಗಡಿ ವಿವಾದದ ಕುರಿತು ಮಹಾರಾಷ್ಟ್ರ ಸರ್ಕಾರ ವಿಶೇಷ ಆಸಕ್ತಿ ತೋರಿಸುತ್ತಿರುವುದರಿಂದ ರಾಜ್ಯ ಸರ್ಕಾರ ತಕ್ಷಣ ಸರ್ವಪಕ್ಷಗಳ ಸಭೆ ಕರೆದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ಬೆಳಗಾವಿ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ಇದೇ 23ರಂದು ವಿಚಾರಣೆ ನಡೆಸಲಿದೆ. ಅದನ್ನು ಎದುರಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಭರದ ಸಿದ್ಧತೆ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ರಾಜ್ಯ ಮಂಡಿಸಬೇಕಾದ ವಾದದ ಬಗ್ಗೆ ಸಮಾಲೋಚನೆ ನಡೆಸಲು ವಿರೋಧ ಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಆ ರಾಜ್ಯ ರಚಿಸಿದೆ. ಆ ರಾಜ್ಯ ಗಡಿವಿವಾದವನ್ನು ಎಷ್ಟೊಂದು ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದಕ್ಕೆ ಇದು ಸಾಕ್ಷಿ’ ಎಂದಿದ್ದಾರೆ.

‘ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಗೆ ಬದ್ಧವಾಗಿ ರಾಜ್ಯ ಬಿಜೆಪಿ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ನಮ್ಮ ಪಕ್ಷ ಬೆಂಬಲಿಸಲಿದೆ. ಸಮಯವ್ಯರ್ಥ ಮಾಡದೆ‌ ಮುಖ್ಯಮಂತ್ರಿ ವಿರೋಧಪಕ್ಷಗಳ ಸಭೆ ಕರೆಯಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು