ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಅಧ್ಯಕ್ಷರಾಗುವಂತೆ ರಾಹುಲ್ ಗಾಂಧಿಯವರನ್ನು ಒತ್ತಾಯಿಸುತ್ತೇವೆ: ಖರ್ಗೆ

Last Updated 27 ಆಗಸ್ಟ್ 2022, 8:27 IST
ಅಕ್ಷರ ಗಾತ್ರ

ಬೆಂಗಳೂರು: ರಾಹುಲ್ ಗಾಂಧಿ ಅವರನ್ನು ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗುವಂತೆ ಒತ್ತಾಯಿಸಲಾಗುವುದು. ಯಾಕೆಂದರೆ, ಅವರನ್ನು ಹೊರತುಪಡಿಸಿ ಪ್ಯಾನ್–ಇಂಡಿಯಾ ವರ್ಚಸ್ಸು ಹೊಂದಿರುವವರು ಬೇರೆ ಯಾರೂ ಇಲ್ಲ ಎಂದು ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಕ್ಷವನ್ನು ಮುನ್ನಡೆಸಲು ಬಯಸುವವರು ದೇಶದಾದ್ಯಂತ ಪರಿಚಿತರಾಗಿರಬೇಕು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಪಶ್ಚಿಮ ಬಂಗಾಳದಿಂದ ಗುಜರಾತ್‌ವರೆಗೆ ಬೆಂಬಲ ಹೊಂದಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಅಧ್ಯಕ್ಷರಾಗುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾದ ಮನ್ನಣೆ ಇರಬೇಕು. ಎಲ್ಲರ ಒಪ್ಪಿಗೆ ಇರಬೇಕು. ಅಂಥವರು ಬೇರೆ ಯಾರೂ ಇಲ್ಲ. ಪಕ್ಷದ ಎಲ್ಲ ನಾಯಕರು ಸೋನಿಯಾ ಗಾಂಧಿ ಅವರು ಮರಳಿ ಪಕ್ಷಕ್ಕಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದರು. ರಾಹುಲ್ ಗಾಂಧಿಯವರನ್ನೂ ಮುಂಚೂಣಿಗೆ ಬರುವಂತೆ ಆಹ್ವಾನಿಸಿದ್ದರು. ನೀವೇ ಹೇಳಿ’ ಎಂದು ಖರ್ಗೆ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಅಧಿಕಾರ ವಹಿಸಿಕೊಳ್ಳಲು ಸಿದ್ಧರಿಲ್ಲ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ, ದೇಶದ ಹಿತಕ್ಕಾಗಿ ಮತ್ತು ಆರ್‌ಎಸ್‌ಎಸ್‌–ಬಿಜೆಪಿ ವಿರುದ್ಧ ಹೋರಾಟಕ್ಕಾಗಿ ಅಧಿಕಾರ ವಹಿಸಿಕೊಳ್ಳುವಂತೆ ಅವರ ಬಳಿ ವಿನಂತಿಸಲಾಗುವುದು ಎಂದು ಖರ್ಗೆ ತಿಳಿಸಿದ್ದಾರೆ.

12 ರಾಜ್ಯಗಳನ್ನು ಆವರಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,570 ಕಿ.ಮೀ ನಡೆಯಲಿರುವಭಾರತ್‌ ಜೋಡೊ ಯಾತ್ರಾ ಸಿದ್ಧತೆಯಲ್ಲಿರುವ ಕಾಂಗ್ರೆಸ್‌ ಪಕ್ಷದ ಕೆಲವು ರಾಜ್ಯ ಘಟಕಗಳು ಇನ್ನೂ ಔಪಚಾರಿಕವಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಹೀಗಾಗಿ ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ ಕೆಲವು ವಾರ ಮುಂದಕ್ಕೆ ಹೋಗಲಿದೆ. ಆದರೆ, ಅಕ್ಟೋಬರ್‌ ಅಂತ್ಯದೊಳಗೆ ಪಕ್ಷವು ಪೂರ್ಣಾವಧಿ ಅಧ್ಯಕ್ಷರನ್ನು ಹೊಂದಲಿದೆ ಎಂದು ಮೂಲಗಳು ಶುಕ್ರವಾರ ಹೇಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT