ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಹತಾಶೆಯಿಂದ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ: ರಾಜನಾಥ್ ಸಿಂಗ್

Last Updated 16 ಮಾರ್ಚ್ 2021, 9:36 IST
ಅಕ್ಷರ ಗಾತ್ರ

ನವದೆಹಲಿ: ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಬಿದ್ದು ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ಮೇಲೆ ವೃಥಾ ಆರೋಪ ಹೊರಿಸುವ ಮೂಲಕ ಹತಾಶೆಯನ್ನು ಪ್ರದರ್ಶಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ ವಾಗ್ದಾಳಿ ನಡೆಸಿದ್ದಾರೆ.

‘ಮಮತಾ ದೀದಿ ಹೊರತುಪಡಿಸಿ ಬೇರೆ ಯಾರೂ ಆರೋಪಗಳನ್ನು ಮಾಡಿಲ್ಲ. ಭದ್ರತಾ ಲೋಪದಿಂದಾಗಿ ಅವಘಡಸಂಭವಿಸಿದೆ ಎಂದು ತನಿಖಾ ಏಜೆನ್ಸಿಗಳು ಮತ್ತು ವೀಕ್ಷಕರ ವರದಿಗಳು ಹೇಳುತ್ತವೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ತಾವು ಗಾಯಗೊಂಡಿದ್ದಕ್ಕೆ ಬಿಜೆಪಿ ಕಾರಣ ಎಂಬ ಅವರ ಆರೋಪ ಅವರ ಹತಾಶೆಯ ಪರಿಣಾಮವಾಗಿದೆ.’ ಎಂದು ರಾಜನಾಥ್ ಸಿಂಗ್ ಟೀಕಿಸಿದ್ದಾರೆ.

ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೊಷಿಸದೆ ಚುನಾವಣೆಗೆ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಮ್ಮದು ಪ್ರಜಾಪ್ರಭುತ್ವ ಆಧಾರಿತ ಪಕ್ಷ. ಚುನಾಯಿತ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ" ಎಂದು ಹೇಳಿದ್ದಾರೆ.

ನಂದಿಗ್ರಾಮದಲ್ಲಿ ಆದ ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಬ್ಯಾನರ್ಜಿ, ನನ್ನ ಧ್ವನಿ ಮತ್ತು ಹೃದಯ ಕಾರ್ಯನಿರ್ವಹಿಸುವವರೆಗೂ ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದರು.

"ಕೆಲವು ದಿನಗಳವರೆಗೆ ಕಾಯಿರಿ, ನನ್ನ ಕಾಲುಗಳು ಸರಿಯಾಗಲಿ. ನಿಮ್ಮ ಕಾಲುಗಳು ಬಂಗಾಳದ ನೆಲದಲ್ಲಿ ಹೇಗೆ ಮುಕ್ತವಾಗಿ ಚಲಿಸುತ್ತವೆ ಎಂದು ನಾನು ನೋಡುತ್ತೇನೆ." ಎಂದು ಯಾರನ್ನೂ ಹೆಸರಿಸದೆ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದರು.

‘ನಮ್ಮ ಸರ್ಕಾರ ಮಾಡಿದಷ್ಟು ಕೆಲಸವನ್ನು ಜಗತ್ತಿನ ಬೇರೆ ಯಾವುದೇ ಸರ್ಕಾರವು ಮಾಡಲು ಸಾಧ್ಯವಾಗಿಲ್ಲ. ಅವರ (ಬಿಜೆಪಿ) ಪ್ರಧಾನ ಮಂತ್ರಿ ದೇಶವನ್ನು ನಡೆಸಲು ಸಾಧ್ಯವಿಲ್ಲ, ಅವರು ಸಂಪೂರ್ಣವಾಗಿ ಅಸಮರ್ಥರು" ಎಂದು ಮಮತಾ ವಾಗ್ದಾಳಿ ನಡೆಸಿದ್ದರು.

ಮಾರ್ಚ್ 10 ರಂದು ನಂದಿಗ್ರಾಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಪ್ರಚಾರ ನಡೆಸುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರು ಬಿದ್ದು ಎಡಗಾಲು, ತಲೆ ಮತ್ತು ಎದೆಗೆ ಗಾಯವಾಗಿತ್ತು. ಆಡಳಿತಾರೂಢ ಟಿಎಂಸಿ ಘಟನೆ ಹಿಂದೆ ಬಿಜೆಪಿ ಪಿತೂರಿ ಇದೆ ಎಂದು ಆರೋಪಿಸಿತ್ತು. ಬಳಿಕ, ಅಧಿಕಾರಿಗಳಿಂದ ವರದಿ ತರಿಸಿಕೊಂಡ ಚುನಾವಣಾ ಆಯೋಗ, ಮಮತಾ ಬ್ಯಾನರ್ಜಿ ಮೇಲೆ ದಾಳಿ ಆಗಿದ್ದಲ್ಲ, ಆಕಸ್ಮಿಕವಾಗಿ ಬಿದ್ದು ಗಾಯವಾಗಿದೆ ಎಂದು ಸ್ಪಷ್ಟಪಡಿಸಿತ್ತು. ಕರ್ತವ್ಯ ಲೋಪದ ಆಧಾರದ ಮೇಲೆ ಭದ್ರತಾ ನಿರ್ದೆಶಕರು, ಎಸ್‌ಪಿ, ಡಿಸಿ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT