ಶನಿವಾರ, ನವೆಂಬರ್ 26, 2022
21 °C

ಶ್ರದ್ಧಾ ವಾಲಕರ್‌ ಹತ್ಯೆ: ಆಫ್ತಾಬ್‌ ಫ್ಲ್ಯಾಟ್‌ನಲ್ಲಿ ಐದು ಚಾಕು ವಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಬೈ ಮೂಲದ ಕಾಲ್‌ಸೆಂಟರ್‌ ಉದ್ಯೋಗಿ, ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್‌ ಎಂಬ ಯುವತಿಯನ್ನು ಭೀಕರವಾಗಿ ಕೊಂದು, 35 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದ ಆರೋಪಿ ಆಫ್ತಾಬ್‌ ಅಮೀನ್‌ ಪೂನಾವಾಲಾನ ಛತರ್‌ಪುರದಲ್ಲಿನ ಫ್ಲ್ಯಾಟ್‌ನಿಂದ ಐದು ಚಾಕುಗಳನ್ನು ದೆಹಲಿ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.

ಅಪರಾಧ ಕೃತ್ಯಕ್ಕೆ ಇವುಗಳನ್ನು ಬಳಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು, ಚಾಕುಗಳನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌ಗೆ) ಪರೀಕ್ಷೆಗೆ ರವಾನಿಸಲಾಗಿದೆ. ಈ ಚಾಕುಗಳನ್ನು ಹತ್ಯೆಗೆ, ದೇಹ ತುಂಡರಿಸಲು ಬಳಸಿದ್ದರೆ ಅದು ಎಫ್‌ಎಸ್‌ಎಲ್‌ ಪರೀಕ್ಷೆಯಿಂದ ಮಾತ್ರ ದೃಢಪಡಲಿದೆ. ಇದಕ್ಕೆ ಸಮಯ ಬೇಕಾಗಲಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಆರೋಪಿಯು ಶ್ರದ್ಧಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ಬಳಸಿದ್ದಾನೆ ಎನ್ನಲಾದ ಗರಗಸ ಈವರೆಗೆ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ದಕ್ಷಿಣ ದೆಹಲಿಯ ಮಹ್ರೌಲಿಯ ತನ್ನ ಫ್ಲ್ಯಾಟ್‌ನಲ್ಲಿ ಆಫ್ತಾಬ್‌ ಅಮೀನ್‌ ಪೂನಾವಾಲಾ ಕಳೆದ ಮೇನಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 300 ಲೀಟರ್ ಸಾಮರ್ಥ್ಯದ ಫ್ರಿಜ್‌ನಲ್ಲಿ ಸುಮಾರು ಮೂರು ವಾರಗಳವರೆಗೆ ಇರಿಸಿದ್ದ. ನಂತರ ಅವುಗಳನ್ನು ನಗರದ ವಿವಿಧೆಡೆ ಮತ್ತು ಛತರ್‌ಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳವರೆಗೆ ಒಂದೊಂದಾಗಿ ಬಿಸಾಡಿದ್ದ.   

ಶ್ರದ್ಧಾ ಕೊಲೆಗಾರನಿಗೆ ಕಠಿಣ ಶಿಕ್ಷೆ ಖಚಿತ: ಅಮಿತ್‌ ಶಾ
ಶ್ರದ್ಧಾ ವಾಲಕರ್‌ ಕೊಲೆ ಪ್ರಕರಣದ ಆರೋಪಿಗಳಿಗೆ ದೆಹಲಿ ಪೊಲೀಸರು ಮತ್ತು ಪ್ರಾಸಿಕ್ಯೂಷನ್ ಶೀಘ್ರದಲ್ಲಿ ಕಠಿಣ ಶಿಕ್ಷೆ ಕೊಡಿಸಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಇಡೀ ಪ್ರಕರಣದ ಮೇಲೆ ಕಣ್ಣಿರಿಸಿದ್ದೇನೆ. ಕಾನೂನು ಮತ್ತು ನ್ಯಾಯಾಲಯಗಳ ಮೂಲಕ, ದೆಹಲಿ ಪೊಲೀಸರು ಮತ್ತು ಪ್ರಾಸಿಕ್ಯೂಷನ್ ತ್ವರಿತಗತಿಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಖಚಿತಪಡಿಸಲಿವೆ ಎನ್ನುವುದನ್ನು ದೇಶದ ಜನರಿಗೆ ಹೇಳಲು ಬಯಸುತ್ತೇನೆ’ ಎಂದರು.

ದೆಹಲಿ ಮತ್ತು ಮುಂಬೈ ಪೊಲೀಸರ ನಡುವೆ ಈ ಪ್ರಕರಣದ ತನಿಖೆಯಲ್ಲಿ ಸಮನ್ವಯದ ಕೊರತೆ ಇಲ್ಲ ಎಂದು ಶಾ ಇದೇ ವೇಳೆ ಸ್ಪಷ್ಟಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು