ಶನಿವಾರ, ಅಕ್ಟೋಬರ್ 24, 2020
22 °C

ಪ್ರಧಾನಿ ಮೋದಿ ಸವಾಲು ಸ್ವೀಕರಿಸಲ್ಲ, ವ್ಯವಸ್ಥೆಯ ನಾಶಪಡಿಸುತ್ತಾರೆ –ರಾಹುಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ವಾಸ್ತವ ಸವಾಲುಗಳನ್ನು ಸ್ವೀಕರಿಸುವುದಿಲ್ಲ. ಅಂತಿಮವಾಗಿ ಇರುವ ವ್ಯವಸ್ಥೆಯನ್ನೇ ನಾಶಪಡಿಸುತ್ತಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕೃಷಿ ಕ್ಷೇತ್ರದ ಸುಧಾರಣೆ, ಕಪ್ಪುಹಣ ನಿರ್ಮೂಲನೆ ಸೇರಿದಂತೆ ಸಂಕೀರ್ಣ ವಿಷಯಗಳಿಗೂ ಅವರು ತುರ್ತು ಪರಿಹಾರ ಘೋಷಿಸುತ್ತಾರೆ. ಆದರೆ, ಕೊನೆಗೆ ವ್ಯವಸ್ಥೆಯೇ ಹದಗೆಡಲಿದೆ’ ಎಂದು ದೂರಿದ್ದಾರೆ.

ಯುಪಿಎ ಸರ್ಕಾರಕ್ಕೆ ಕೃಷಿ ವಲಯದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿಯೇ ಇರಲಿಲ್ಲ ಎಂಬ ಪ್ರಧಾನಿ ಟೀಕೆಯನ್ನು ಉಲ್ಲೇಖಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಮಂಡಿ ವ್ಯವಸ್ಥೆಯ ಲೋಪ, ಅಲ್ಲಿರುವ ಭ್ರಷ್ಟಾಚಾರದ ಅರಿವು ನಮಗಿದೆ. ನಾವೂ ವ್ಯವಸ್ಥೆ ಸುಧಾರಿಸಲು ಬಯಸುತ್ತೇವೆ. ಅದು ಸುಲಭದ ಕಾರ್ಯವಲ್ಲ, ಸಂಕೀರ್ಣವಾದುದು’ ಎಂದು ಹೇಳಿದರು.

‘ಕಪ್ಪುಹಣ ನಿರ್ಮೂಲನೆಯು ಕ್ಲಿಷ್ಟಕರವಾದ ಸವಾಲು. ಆದರೆ, ಅವರು ನೋಟು ರದ್ದತಿ ಮಾಡಿ, ಸಮಸ್ಯೆಗೆ ಪರಿಹಾರ ಒದಗಿಸಿದ್ದೇವೆ ಎಂದರು. ಅಂತಿಮವಾಗಿ, ಈ ನಿರ್ಧಾರದ ಮೂಲಕ ಅವರು ಹೆಚ್ಚಿನ ಉದ್ಯೋಗಳನ್ನು ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನೇ ನಾಶ ಪಡಿಸಿದರು’ ಎಂದು ಅವರು ವ್ಯಾಖ್ಯಾನಿಸಿದರು.

ಈಗ ಕೇಂದ್ರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳು ಕೂಡಾ ಅಂತಿಮವಾಗಿ ಹಲವು ವರ್ಷಗಳ ಪ್ರಯತ್ನದ ಫಲವಾಗಿ ನಿರ್ಮಾಣವಾಗಿರುವ ಆಹಾರ ಭದ್ರತಾ ವ್ಯವಸ್ಥೆಯನ್ನೇ ನಾಶಪಡಿಸಲಿದೆ ಎಂದು ಟೀಕಿಸಿದರು.

‘ನಾನು ಬಿಜೆಪಿ ಜೊತೆ ಸುದೀರ್ಘ ಹೋರಾಟಕ್ಕೆ ಸಿದ್ಧನಾಗಿದ್ದೇನೆ. ನಾನು ತಾಳ್ಮೆಯುಳ್ಳ ವ್ಯಕ್ತಿ, ಕಾಯುತ್ತೇನೆ. ಖಾಲಿಯಾಗಿದ್ದ ಸುರಂಗಕ್ಕೆ ಕೈಬೀಸುತ್ತಿದ್ದ ಪ್ರಧಾನಿ ಯಾರು ಎಂಬುದು ದೇಶದ ಯುವಜನರಿಗೆ ಒಂದಲ್ಲ ಒಂದು ದಿನ ಅರ್ಥವಾಗಲಿದೆ. ಸತ್ಯ ಒಂದಲ್ಲ ಒಂದುದಿನ ಹೊರಗೆ ಬರಬೇಕು’ ಎಂದು ಹೇಳಿದರು.

‘ವಿರೋಧ ಪಕ್ಷಗಳು ದುರ್ಬಲವಾಗಿವೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ವಿರೋಧಪಕ್ಷ ತನ್ನ ಕೆಲಸವನ್ನು ಮಾಡುತ್ತಿದೆ. ಆದರೆ, ಜನರ ಧ್ವನಿಯನ್ನು ರಕ್ಷಿಸಬೇಕಾಗಿರುವುದು ಮಾಧ್ಯಮ ಮತ್ತು ನ್ಯಾಯಾಂಗ ವ್ಯವಸ್ಥೆ. ಬಿಜೆಪಿಯು ಈ ಕ್ಷೇತ್ರಗಳ ಮೇಲೂ ತನ್ನ ಪ್ರಾಬಲ್ಯವನ್ನು ಹೊಂದಿದೆ’ ಎಂದೂ ವ್ಯಾಖ್ಯಾನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು