ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯಕ್ಕೆ 75: ದಂಡಿ ಯಾತ್ರೆ ಪುನರಾವರ್ತಿಸಲಿದೆ ಮೋದಿ ಸರ್ಕಾರ

Last Updated 12 ಮಾರ್ಚ್ 2021, 1:40 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 2023ರ ವರೆಗೂ ಇವು ನಡೆಯಲಿವೆ. ಮಹಾತ್ಮ ಗಾಂಧಿಯವರ ಐತಿಹಾಸಿಕ ಉಪ್ಪಿನ ಸತ್ಯಾಗ್ರಹವನ್ನು ಇಂದು (ಶುಕ್ರವಾರ) ಪುನರಾವರ್ತಿಸಲು ಉದ್ದೇಶಿಸಲಾಗಿದೆ.

ಬ್ರಿಟಿಷ್ ಸರ್ಕಾರವು ಉಪ್ಪಿನ ಕಾಯ್ದೆಯನ್ನು ಹಿಂಪಡೆಯುವಂತೆ ಮಾಡಿದ್ದ ‘ದಂಡಿ ಯಾತ್ರೆ’ಯ 91ನೇ ವರ್ಷಾಚರಣೆ ವೇಳೆ ‘ಆಜಾದಿ ಕಾ ಅಮೃತ್ ಮಹೋತ್ಸವ್‌’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ಚಾಲನೆ ನೀಡಲಿದ್ದಾರೆ.

81 ಮಂದಿ ಯುವಕರ ತಂಡವು 1930ರಲ್ಲಿ ಮಹಾತ್ಮ ಗಾಂಧಿ ಅವರು ಯಾತ್ರೆ ನಡೆಸಿದ್ದ ಅದೇ ಹಾದಿಯಲ್ಲಿ ಯಾತ್ರೆ ನಡೆಸಿ ಸ್ವಾತಂತ್ರ್ಯಾ ನಂತರ ದೇಶದ ಪ್ರಗತಿಯ ಸಂದೇಶವನ್ನು ಸಾರಲಿದೆ.

81 ಮಂದಿ ಯುವಕರ ಇನ್ನೊಂದು ತಂಡವು ಸಾಬರಮತಿ ಆಶ್ರಮದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಜನಿಸಿದ್ದ ನಡಿಯಾದ್ ವರೆಗೆ ಯಾತ್ರೆ ನಡೆಸಲಿದೆ. ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಇದರ ನೇತೃತ್ವ ವಹಿಸಲಿದ್ದಾರೆ. 75 ಕಿ.ಮೀ. ಕ್ರಮಿಸಲಿರುವ ಈ ಪಾದಯಾತ್ರೆಯು ಮಾರ್ಚ್‌ 16ರ ವರೆಗೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

‘ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಪೂರ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಸಂಘಟನೆ ಸರ್ಕಾರದ್ದಲ್ಲ. ಆದರೆ ಇದಕ್ಕೆ ಸರ್ಕಾರವೇ ವ್ಯವಸ್ಥೆ ಮಾಡಲಿದೆ’ ಎಂದು ಸಚಿವರು ತಿಳಿಸಿದ್ದಾರೆ. 75ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇವು 2023ರ ವರೆಗೂ ಮುಂದುವರಿಯಲಿವೆ ಎಂದೂ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿದುರಾಶ್ವತ್ಥ, ಕಿತ್ತೂರು ಮತ್ತು ಶಿವಪುರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬೆಂಗಳೂರು ಮತ್ತು ಚಿತ್ರದುರ್ಗದ ಕೋಟೆಗಳಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

‘ಆಜಾದಿ ಕಾ ಅಮೃತ್ ಮಹೋತ್ಸವ್‌’ಗೆ ಚಾಲನೆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT