ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಚೀತಾ ಭಾರತಕ್ಕೆ ಆಗಮನ ಇನ್ನಷ್ಟು ವಿಳಂಬ

ಮೂಡದ ಒಡಂಬಡಿಕೆ: ದಕ್ಷಿಣ ಆಫ್ರಿಕಾದಲ್ಲೇ ‘ಕ್ವಾರಂಟೈನ್‌‘ನಲ್ಲಿರುವ ವನ್ಯಜೀವಿಗಳು
Last Updated 4 ಡಿಸೆಂಬರ್ 2022, 12:56 IST
ಅಕ್ಷರ ಗಾತ್ರ

ಭೋಪಾಲ್‌: ಭಾರತಕ್ಕೆ ಕರೆತರಬೇಕಾಗಿದ್ದ 12 ಚೀತಾಗಳು ನಾಲ್ಕು ತಿಂಗಳಿನಿಂದ ದಕ್ಷಿಣ ಆಫ್ರಿಕಾದಲ್ಲಿಯೇ ‘ಕ್ವಾರಂಟೈನ್‌’ನಲ್ಲಿವೆ. ಇದರಿಂದ ಅವುಗಳ ದೇಹಸಾಮರ್ಥ್ಯದಲ್ಲಿಯೂ ವ್ಯತ್ಯಾಸವಾಗಿದೆ.

ದಕ್ಷಿಣಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಇವುಗಳನ್ನು ಸ್ಥಳಾಂತರಿಸಲು ಒಪ್ಪಂದ ಏರ್ಪಡುವುದು ವಿಳಂಬವಾಗಿರುವುದು ಈ ಚೀತಾಗಳು ಕ್ವಾರಂಟೈನ್‌ನಲ್ಲಿರಲು ಕಾರಣವಾಗಿದೆ.

ಜುಲೈ 15ರಿಂದ ಇವು ಬಂಧನದಲ್ಲಿದ್ದು, ಮಾಂಸಕ್ಕಾಗಿ ಸ್ವತಃ ಬೇಟೆಯಾಡದ ಕಾರಣ ದೇಹಸಾಮರ್ಥ್ಯ ಕುಗ್ಗಿದೆ. ಒಂದೇ ಕಡೆ ಜಡವಾಗಿದ್ದಲ್ಲಿ ಮನುಷ್ಯರಂತೆ ಇವೂ ತೂಕ ಪಡೆದುಕೊಳ್ಳುತ್ತವೆ ಎನ್ನುತ್ತಾರೆ ಪರಿಣತರು.

ಸುದೀರ್ಘ ಕಾಲ ಬಂಧನದಲ್ಲಿರುವುದು ಚೀತಾಗಳ ದೇಹಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಮೀಬಿಯಾದಿಂದ ಈಗಾಗಲೇ ಅಂದರೆ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಭಾರತಕ್ಕೆ ಕರೆತರಲಾಗಿರುವ 8 ಚೀತಾಗಳ ಜೊತೆಗೆ ದಕ್ಷಿಣ ಆಫ್ರಿಕಾದ ಈ 12 ಚೀತಾಗಳು ಸೇರಿಕೊಳ್ಳಬೇಕಾಗಿದೆ.

ಭಾರತಕ್ಕೆ ಸ್ಥಳಾಂತರಿಸಲು ಉದ್ದೇಶಿಸಿರುವ 12 ಚೀತಾಗಳಲ್ಲಿ ಐದು ಹೆಣ್ಣು ಚೀತಾಗಳಿವೆ. ಮೂರನ್ನು ದಕ್ಷಿಣ ಆಫ್ರಿಕಾದ ಕ್ವಾಜುಲು ನಟಲ್‌ ಪ್ರಾಂತ್ಯ, ಉಳಿದ ಒಂಭತ್ತನ್ನು ಲಿಂಪೊಪೊ ಪ್ರಾಂತ್ಯದಲ್ಲಿ ಸೆರೆಯಲ್ಲಿಡಲಾಗಿದೆ.

’ಚೀತಾಗಳ ಸ್ಥಳಾಂತರ ಯೋಜನೆ ಕುರಿತಂತೆ ಎಲ್ಲವೂ ಸಕಾರಾತ್ಮಕವಾಗಿವೆ. ಕುನೊ ಉದ್ಯಾನದಲ್ಲಿ ಆಗಿರುವ ಸಿದ್ಧತೆಗಳನ್ನು ಕುರಿತು ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾದ ನಿಯೋಗ ತೃಪ್ತಿ ವ್ಯಕ್ತಪಡಿಸಿದೆ. ಭಾರತ–ದಕ್ಷಿಣ ಆಫ್ರಿಕಾ ನಡುವೆ ಮಾಸಾಂತ್ಯದೊಳಗೆ ಒಡಂಬಡಿಕೆ ಏರ್ಪಡುವ ಸಂಭವವಿದೆ’ ಎನ್ನುತ್ತಾರೆ ಪರಿಣತರು.

ಚೀತಾಗಳನ್ನು ಬರಮಾಡಿಕೊಳ್ಳಲು ನಾವು ಸಿದ್ಧವಿದ್ದು, ಶೀಘ್ರ ಒಡಂಬಡಿಕೆ ಏರ್ಪಡುವ ನಿರೀಕ್ಷೆಯಿದೆ ಎಂದು ಮಧ್ಯಪ್ರದೇಶದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆ.ಎಸ್.ಚೌಹಾಣ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT