ಶನಿವಾರ, ಅಕ್ಟೋಬರ್ 16, 2021
22 °C

ಸ್ವಚ್ಛ ಭಾರತ್ ಮಿಷನ್‌, ಅಮೃತ್ 2ನೇ ಹಂತದ ಯೋಜನೆಗಳಿಗೆ ಪ್ರಧಾನಿ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ವಚ್ಛ ಭಾರತ್‌ ಮಿಷನ್‌– ಅರ್ಬನ್ ಮತ್ತು ಅಮೃತ್ ಕಾರ್ಯಕ್ರಮದ ಎರಡನೇ ಹಂತದ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ನಗರೀಕರಣದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು, ನಗರ ಪ್ರದೇಶಗಳನ್ನು ತ್ಯಾಜ್ಯ ಮುಕ್ತವಾಗಿಸುವುದು, ಸಮರ್ಪಕ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ಹೇಳಿಕೆ ತಿಳಿಸಿದೆ.

ಸ್ವಚ್ಛಭಾರತ್ ಮಿಷನ್‌ನ 2ನೇ ಹಂತದ ಯೋಜನೆಗೆ 1.41 ಲಕ್ಷ ಕೋಟಿ ಹಣ ನಿಗದಿಪಡಿಸಿದೆ. ಅಮೃತ್‌ 2.0 ಯೋಜನೆಗಾಗಿ ₹ 2.87 ಲಕ್ಷ ಕೋಟಿ ಹಣ ನಿಗದಿಪಡಿಸಲಾಗಿದೆ. ನಗರ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವನೀರು ಸೌಲಭ್ಯ ಕಲ್ಪಿಸುವುದು ಅಮೃತ್ ಯೋಜನೆಯ ಗುರಿ. 4,700 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, 2.68 ಕೋಟಿ ನಲ್ಲಿ ಸಂಪರ್ಕ ನೀಡುವ ಉದ್ದೇಶವಿದೆ ಎಂದು ಹೇಳಿಕೆ ತಿಳಿಸಿದೆ.

ಸ್ವಚ್ಛ ಭಾರತ್‌ ಮಿಷನ್‌ 2.0 ಯೋಜನೆಯಡಿ ಎಲ್ಲ ನಗರಗಳನ್ನು ತ್ಯಾಜ್ಯ ಮುಕ್ತಗೊಳಿಸುವುದು, ಬಯಲು ಶೌಚಮುಕ್ತಗೊಳಿಸುವುದು ಈ ಮೂಲಕ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ರಕ್ಷಣೆಗೆ ಒತ್ತು ನೀಡುವ ಗುರಿ ಇದೆ. ಅಲ್ಲದೆ, ಘನ್ಯ ತ್ಯಾಜ್ಯವನ್ನು ವಿಭಾಗಿಸಿ ಮೂರು ಆರ್ ಧ್ಯೇಯದಡಿ (ರೆಡ್ಯೂಸ್‌, ರೀ ಯೂಸ್‌ ಮತ್ತು ರೀ ಸೈಕಲ್) ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ಗುರಿ ಹೊಂದಲಾಗಿದೆ.

ಅಮೃತ್ 2.0 ಯೋಜನೆಯಡಿ 4,700 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುಣಮಟ್ಟದ ನೀರು ಪೂರೈಕೆ, 2.68 ಕೋಟಿ ನಲ್ಲಿಗಳ ಸಂಪರ್ಕ, ಶೇ 100ರಷ್ಟು ನೀರು ಸಂಸ್ಕರಣೆಗೆ  ಒತ್ತು ನೀಡಲಿದ್ದು, ನಗರ ಪ್ರದೇಶಗಳ ಸುಮಾರು 10.5 ಕೋಟಿ ಜನರಿಗೆ ಇದರ ಲಾಭ ದೊರೆಯಲಿದೆ ಎಂದು ಪ್ರಧಾನಮಂತ್ರಿಗಳ ಕಚೇರಿಯು ತಿಳಿಸಿದೆ.

ಸ್ವಚ್ಛ ಎಂಬುದು ಇಂದು ಜನಾಂದೋಲನವಾಗಿ ಹೊರಹೊಮ್ಮಿದೆ. ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಬಯಲುಶೌಚ ಮುಕ್ತ ಎಂಂಬುದನ್ನು ಘೋಷಿಸಿವೆ. ಶೇ 70 ರಷ್ಟು ಘನತ್ಯಾಜ್ಯವನ್ನು ವೈಜ್ಞಾನಿಕ ಕ್ರಮದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು