ಬುಧವಾರ, ಮಾರ್ಚ್ 22, 2023
20 °C

ಉತ್ತರಾಖಂಡ್: 9 ಜನ ಸಿಎಂ, 5 ವರ್ಷ ಅವಧಿ ಪೂರೈಸಿದ್ದು ಒಬ್ಬರೇ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್: ಕಳೆದ ನಾಲ್ಕು ತಿಂಗಳ ಹಿಂದೆ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ತೀರ್ಥ ಸಿಂಗ್ ರಾವತ್ ಅವರು ದಿಢೀರ್ ಆಗಿ ರಾಜೀನಾಮೆ ನೀಡಿದ್ದಾರೆ. ತಾವು ಸಿಎಂ ಸ್ಥಾನದಲ್ಲಿ ಮುಂದುವರೆದರೆ ಸಾಂವಿಧಾನಿಕ ಬಿಕ್ಕಟ್ಟು ಸಂಭವಿಸಬಹುದು ಎಂದು ಅವರು ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ.

ವಿಪರ್ಯಾಸವೆಂದರೆ, ಒಬ್ಬ ಮುಖ್ಯಮಂತ್ರಿ ಹೊರತುಪಡಿಸಿ ಬೇರೆ ಯಾರೂ ಕೂಡ ಉತ್ತರಾಖಂಡ ಸಿಎಂ ಆಗಿ ಪೂರ್ಣಾವಧಿಯನ್ನು ಪೂರೈಸಿಲ್ಲ. ಇದುವರೆಗೆ ಉತ್ತರಾಖಂಡ 9 ಮುಖ್ಯಮಂತ್ರಿಗಳನ್ನು ಕಂಡಿದೆ.

2000 ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ನಂತರ 2002 ರಿಂದ 2007 ರವರೆಗೆ ಎನ್.ಡಿ ತಿವಾರಿ ಅವರು ಐದು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

2000 ರಲ್ಲಿ ಹಂಗಾಮಿ ವಿಧಾನಸಭೆ ರಚನೆಯಾದಾಗ ಬಿಜೆಪಿ ಸರ್ಕಾರ ರಚಿಸಿತ್ತು. ಆಗ ನಿತ್ಯಾನಂದ ಸ್ವಾಮಿ ಮೊದಲ ಮುಖ್ಯಮಂತ್ರಿಯಾಗಿದ್ದರು (354 ದಿನ). ನಂತರ ಭಗತ್ ಸಿಂಗ್ ಕೋಶಿಯಾರಿ  122 ದಿನ ಸಿಎಂ ಆಗಿದ್ದರು.

2007ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಭುವನ್ ಚಂದ್ರ ಖಂಡೂರಿ (111ದಿನ), ರಮೇಶ್ ಪೋಕ್ರಿಯಾಲ್ (2ವರ್ಷ 75 ದಿನ) ಮತ್ತೊಮ್ಮೆ ಖಂಡೂರಿ (184 ದಿನ) ಸಿಎಂ ಆಗಿದ್ದರು.

2012 ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿದಾಗಲೂ ವಿಜಯ್ ಬಹುಗುಣ (1 ವರ್ಷ 324 ದಿನ), ಮತ್ತು ಹರೀಶ್ ರಾವತ್ (2 ವರ್ಷ 55 ದಿನ) ಸಿಎಂ ಆಗಿದ್ದರು. ಈ ಅವಧಿಯಲ್ಲಿ ಕೆಲಕಾಲ ರಾಷ್ಟ್ರಪತಿ ಆಡಳಿತವೂ ಜಾರಿಯಲ್ಲಿತ್ತು.

ನಾಲ್ಕನೇ ವಿಧಾನಸಭೆಗೆ ನಡೆದ (2017 ರಿಂದ 2022) ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದಾಗ ತ್ರಿವೇಂದ್ರ ಸಿಂಗ್ ರಾವತ್ ಸುಮಾರು 4 ವರ್ಷ ಸಿಎಂ ಆಗಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದರಿಂದ ತೀರ್ಥ ಸಿಂಗ್ ರಾವತ್ 114 ದಿನ ಆಡಳಿತ ನಡೆಸಿ ಅವಧಿಗೂ ಮುನ್ನವೇ ನಿರ್ಗಮಿಸಿದ್ದಾರೆ.

ತೀರ್ಥ ಸಿಂಗ್ ಅವರು ಶಾಸಕರಾಗಿರಲಿಲ್ಲ. ಹೀಗಾಗಿ ಅವರು ಮುಂದಿನ ಎರಡು ತಿಂಗಳು ಒಳಗೆ ಚುನಾವಣೆಗೆ ಸ್ಪರ್ಧಿಸಬೇಕಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಚುನಾವಣೆ ಆಯೋಗ ಹೇಳಿತ್ತು. ಅಲ್ಲದೇ ಚುನಾವಣೆ ನಡೆಸಬೇಕಾದರೆ ಅವಧಿ ಕನಿಷ್ಠ 1 ವರ್ಷ ಇರಬೇಕು ಎಂಬ ನಿಯಮ ಕೂಡ ಇದೆ.

ಇದನ್ನೂ ಓದಿ: ಉತ್ತರಾಖಂಡದ ಸಿ.ಎಂ ರಾಜೀನಾಮೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು