ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸ್ವರೂಪದ ಕೊರೊನಾ ತಡೆಗೆ ಸರ್ಕಾರದ ಬಿಗಿಕ್ರಮ

Last Updated 22 ಡಿಸೆಂಬರ್ 2020, 20:11 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ನ ಹೊಸ ಸ್ವರೂಪದ ಕೊರೊನಾವೈರಸ್ ಭಾರತದಲ್ಲಿ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ನವೆಂಬರ್‌ 25ರಿಂದ ಡಿಸೆಂಬರ್ 23ರವರೆಗೆ ಬ್ರಿಟನ್‌ನಿಂದ ಮತ್ತು ಬ್ರಿಟನ್‌ ಮೂಲಕ ಭಾರತಕ್ಕೆ ಬಂದಿಳಿದಿರುವ ವಿಮಾನ ಪ್ರಯಾಣಿಕರನ್ನು ಪತ್ತೆ ಮಾಡಿ, ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಈ ಕೊರೊನಾವೈರಸ್‌ ಹರಡದಂತೆ ತಡೆಯಲು ಆರೋಗ್ಯ ಸಚಿವಾಲಯವು ಮಂಗಳವಾರ ನೂತನ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (ಎಸ್‌ಒಪಿ) ಜಾರಿಗೆ ತಂದಿದೆ. ಈಗಾಗಲೇ ಜಾರಿಯಲ್ಲಿರುವ ಕೋವಿಡ್‌-19 ಎಸ್‌ಒಪಿಗಳ ಜತೆಯಲ್ಲಿಯೇ ಈ ನೂತನ ಎಸ್‌ಒಪಿಗಳು ಜಾರಿಯಲ್ಲಿ ಇರಲಿವೆ.

ಈ ಎಸ್‌ಒಪಿಗಳ ಪ್ರಕಾರ ಮಂಗಳವಾರದಿಂದಲೇ ದೇಶದ ಎಲ್ಲಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ ಆರ್‌ಟಿ-ಪಿಸಿಆರ್‌ ತಪಾಸಣೆಗಳನ್ನು ನಡೆಸಲಾಗಿದೆ. ಈ ತಪಾಸಣೆಗೆ ಒಳಪಟ್ಟವರಲ್ಲಿ ಹಲವರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಆದರೆ ಇದು ಮೂಲ ಕೊರೊನಾವೈರಸ್‌ನಿಂದ ಬಂದದ್ದೇ ಅಥವಾ ನೂತನ ಸ್ವರೂಪದಿಂದ ಬಂದದ್ದೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ.

ನವೆಂಬರ್ 25ರಿಂದ ಈವರೆಗೆ ಬ್ರಿಟನ್‌ನಿಂದ ಮತ್ತು ಬ್ರಿಟನ್‌ನ ಮೂಲಕ ಭಾರತಕ್ಕೆ ವಿಮಾನಗಳಲ್ಲಿ ಬಂದಿಳಿದಿರುವ ಪ್ರಯಾಣಿಕರ ವಿವರಗಳನ್ನು ಕಲೆಹಾಕಿ, ಪತ್ತೆ ಮಾಡಲು ಎಲ್ಲಾ ರಾಜ್ಯ ಸರ್ಕಾರಗಳು ಮುಂದಾಗಿವೆ.

'ಲಸಿಕೆಗೆ ತೊಂದರೆ ಇಲ್ಲ': ಕೋವಿಡ್‌ ನಿಯಂತ್ರಣಕ್ಕೆ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳು, ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ನ ಹೊಸ ಸ್ವರೂಪದ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೋವಿಡ್‌-19ಗೆ ಕಾರಣವಾಗುವ ಕೊರೊನಾವೈರಸ್‌ನ ಹೊರಕವಚದಲ್ಲಿ ಇರುವ ಮುಳ್ಳು ಚಾಚಿಕೆಗಳು (ಸ್ಪೈಕ್‌ ಪ್ರೊಟೀನ್) ಮನುಷ್ಯನ ಜೀವಕೋಶಗಳಿಗೆ ಅಂಟಿಕೊಳ್ಳುತ್ತದೆ. ಆಮೂಲಕ ಮನುಷ್ಯನ ದೇಹವನ್ನು ಪ್ರವೇಶಿಸುತ್ತವೆ. ಈಗ ಪತ್ತೆಯಾಗಿರುವ ಕೊರೊನಾವೈರಸ್‌ನ ನೂತನ ಸ್ವರೂಪದಲ್ಲಿ ಮುಳ್ಳು ಚಾಚಿಕೆಗಳ ಸಂಖ್ಯೆ ಯಥೇಚ್ಛವಾಗಿದೆ. ಹೀಗಾಗಿ ಇದು ಕ್ಷಿಪ್ರವಾಗಿ ಹರಡುತ್ತದೆ. ಫೈಜರ್‌, ಮೊಡೆರ್ನಾ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಲಸಿಕೆಗಳು ಈ ಮುಳ್ಳು ಚಾಚಿಕೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕೊಡುತ್ತವೆ. ಹೀಗಾಗಿ ಕೊರೊನಾವೈರಸ್‌ನ ನೂತನ ಅವತರಣಿಕೆಯ ವಿರುದ್ಧವೂ ಈ ಸಲಿಕೆಗಳು ಪರಿಣಾಮಕಾರಿಯಾಗಬಲ್ಲವುನಿರೀಕ್ಷಿಸಲಾಗಿದೆ ಎಂದು ಯೂರೋಪ್ ಸೆಂಟರ್‌ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್‌ ಹೇಳಿದೆ.

***

ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ನ ನೂತನ ಸ್ವರೂಪವು ಭಾರತದಲ್ಲಿ ಈವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಗಾಬರಿಯಾಗುವ ಅವಶ್ಯಕತೆ ಇಲ್ಲ. ಆದರೆ ಎಚ್ಚರದಿಂದ ಮಾತ್ರ ಇರಲೇಬೇಕು.
-ಡಾ.ವಿ.ಕೆ.ಪೌಲ್, ನೀತಿ ಆಯೋಗದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT