ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯು ಮಾಲಿನ್ಯ ತಡೆ: ಎನ್‌ಜಿಟಿಯಿಂದ ಕಾರ್ಯಪಡೆ ರಚನೆ

Last Updated 14 ಏಪ್ರಿಲ್ 2021, 14:50 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ವಾಯು ಮಾಲಿನ್ಯ ತಡೆಯುವುದು ಹಾಗೂ ವಾಯುವಿನ ಗುಣಮಟ್ಟವನ್ನು ಸುಧಾರಿಸುವ ಸಂಬಂಧ ಕೈಗೊಳ್ಳುವ ಕ್ರಮಗಳ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಷ್ಟ್ರೀಯ ಕಾರ್ಯಪಡೆಯನ್ನು (ಎನ್‌ಟಿಎಫ್‌) ರಚಿಸಿದೆ.

ಈ ಕಾರ್ಯಪಡೆಯು 8 ಜನ ಸದಸ್ಯರನ್ನು ಒಳಗೊಂಡಿರಲಿದೆ. ವಾಯುವಿನ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಎಲ್ಲ ಹಂತಗಳಲ್ಲಿಯೂ ಸಮನ್ವಯ ಹಾಗೂ ಸಮಗ್ರವಾದ ಪ್ರಯತ್ನದ ಅಗತ್ಯವಿದೆ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ.ಗೋಯಲ್‌ ನೇತೃತ್ವದ ಪೀಠ ಹೇಳಿದೆ.

ದೇಶದಲ್ಲಿ ಪ್ರತಿ ವರ್ಷ 15 ಲಕ್ಷಕ್ಕೂ ಅಧಿಕ ಜನರು ವಾಯುಮಾಲಿನ್ಯದಿಂದಾಗಿ ಸಾವನ್ನಪ್ಪುತ್ತಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಜಿಟಿ ಈ ಕ್ರಮ ಕೈಗೊಂಡಿದೆ.

ಪರಿಸರ, ಅರಣ್ಯ ಸಚಿವಾಲಯದ ಕಾರ್ಯದರ್ಶಿ ಈ ಕಾರ್ಯಪಡೆಯ ನೇತೃತ್ವ ವಹಿಸುವರು. ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ, ರಸ್ತೆ ಸಾರಿಗೆ, ಪೆಟ್ರೋಲಿಯಂ, ಇಂಧನ, ಕೃಷಿ, ಆರೋಗ್ಯ ಸಚಿವಾಲಯಗಳ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಈ ಅಧಿಕಾರಿಗಳು ಜಂಟಿ ಕಾರ್ಯದರ್ಶಿಗೆ ಸಮನಾದ ಹುದ್ದೆಗಿಂತ ಕಡಿಮೆ ದರ್ಜೆಯ ಅಧಿಕಾರಿಗಳಾಗಿರಬಾರದು. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಸಹ ಈ ಕಾರ್ಯಪಡೆಯ ಸದಸ್ಯರಾಗಿರುತ್ತಾರೆ.

ಪ್ರತಿ ಹಂತದಲ್ಲಿಯೂ ಉತ್ತರದಾಯಿತ್ವ ನಿಗದಿ ಮಾಡುವುದು. ವಾಯು ಮಾಲಿನ ತಡೆಗಟ್ಟಲು ರೂಪಿಸಿರುವ ನಿಯಮ, ಕಾಲಕಾಲಕ್ಕೆ ಹೊರಡಿಸುವ ಆದೇಶಗಳ ಉಲ್ಲಂಘನೆ ಕಂಡು ಬಂದಾಗ ಪರಿಹಾರಧನವನ್ನು ವಸೂಲಿ ಮಾಡಬೇಕು ಎಂದು ಪೀಠ ಹೇಳಿದೆ.

‘ಕಾರ್ಯಪಡೆಯು ಒಂದು ತಿಂಗಳ ಒಳಗಾಗಿ ಮೊದಲ ಸಭೆಯನ್ನು ಆಯೋಜಿಸಬೇಕು. ನಂತರ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳ ಕಾರ್ಯವನ್ನು ಪರಿಶೀಲಿಸಲು ಸಭೆಗಳನ್ನು ನಡೆಸಬೇಕು’ ಎಂದೂ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT