ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಬೂಸ್ಟರ್‌ ಲಸಿಕೆ ಕುರಿತು ಯೋಚಿಸುವ ಅಗತ್ಯವಿಲ್ಲ: ತಜ್ಞರ ಅಭಿಮತ

Last Updated 18 ಸೆಪ್ಟೆಂಬರ್ 2021, 10:10 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಇನ್ನೂ ಶೇ 40ರಷ್ಟು ಮಂದಿ ಮೊದಲ ಡೋಸ್‌ ಕೋವಿಡ್‌ ಲಸಿಕೆ ತೆಗೆದುಕೊಳ್ಳಬೇಕಿರುವ ಈ ಹಂತದಲ್ಲಿ ‘ಬೂಸ್ಟರ್‌ ಡೋಸೇಜ್‌‘ ಲಸಿಕೆ ನೀಡುವುದರ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದು ಕೆಲವು ರೋಗನಿರೋಧಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕದ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೂಸ್ಟರ್‌ ಡೋಸೇಜ್‌ ಲಸಿಕೆ ನೀಡುವ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಿಜ್ಞಾನಿಗಳು, ‘ನಮ್ಮ ದೇಶದಲ್ಲಿ ಸದ್ಯಕ್ಕೆ ಆ ಬಗ್ಗೆ ಯೋಚಿಸುವ ಅಗತ್ಯವಿಲ್ಲ‘ ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ (ಎನ್ಐಐ)ಯ ರೋಗನಿರೋಧಕ ತಜ್ಞ ಸತ್ಯಜಿತ್ ರಾತ್, ‘ದೇಶದ ಒಟ್ಟು ವಯಸ್ಕರಲ್ಲಿ ಶೇಕಡಾ 15 ಕ್ಕಿಂತ ಕಡಿಮೆ ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಅಂದರೆ, ‘ಸೋಂಕಿಗೆ ಹೆಚ್ಚು ಗುರಿಯಾಗುವ‘ ದೇಶದ ಮುಕ್ಕಾಲು ಭಾಗದಷ್ಟು ಜನರು ಇನ್ನೂ ಎರಡು ಡೋಸ್‌ ಲಸಿಕೆಗಳನ್ನು ಪಡೆದುಕೊಂಡಿಲ್ಲ. ಹಾಗಾಗಿ, ಈ ಹಂತದಲ್ಲಿ ಮೂರನೇ ಡೋಸ್ ಲಸಿಕೆ ಬಗ್ಗೆ ಯೋಜನೆ ರೂಪಿಸುವುದು ನೈತಿಕವಾಗಿಯೂ ಸರಿಯಾದ ಕ್ರಮವಲ್ಲ‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾತ್ ಅವರ ಮಾತನ್ನು ಒಪ್ಪಿದ ಮತ್ತೊಬ್ಬ ರೋಗನಿರೋಧಕ ತಜ್ಞರಾದ ವಿನೀತಾ ಬಾಲ್, ‘ದೇಶದಲ್ಲಿ ಲಸಿಕೆ ಪಡೆಯಲು ಅರ್ಹರಿರುವವರಲ್ಲಿ ಶೇ 40 ರಷ್ಟು ಜನರು ಇನ್ನೂ ಮೊದಲ ಡೋಸ್ ಪಡೆದಿಲ್ಲ. ಹಾಗಾಗಿ ಈ ಹಂತದಲ್ಲಿ ಬೂಸ್ಟರ್ ಡೋಸ್‌ಗಳನ್ನು ನೀಡುವ ಬಗ್ಗೆ ಯೋಚಿಸಬಾರದು‘ ಎಂದಿದ್ದಾರೆ.

‘ದುರ್ಬಲವಾಗಿರುವ ವ್ಯಕ್ತಿಗಳು ಹಾಗೂ ಇತರೆ ಬೇರೆ ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾಗೂ ರೋಗದ ತೀವ್ರತೆಯನ್ನು ಗಮನಿಸಿ, ಬೂಸ್ಟರ್‌ ಡೋಸ್‌ಗಳನ್ನು ನೀಡಲು ಪರಿಗಣಿಸಬಹುದು‘ ಎಂದುಪುಣೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಷನ್‌ ಅಂಡ್‌ ರೀಸರ್ಚ್‌ನ ಅತಿಥಿ ಉಪನ್ಯಾಸಕಿಯೂ ಆಗಿರುವ ವಿನೀತಾ ಬಾಲ್ ಹೇಳಿದ್ದಾರೆ.

‘ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರನ್ನು, ರೋಗದ ತೀವ್ರತೆಯ ಆಧಾರದ ಮೇಲೆ ಹೆಚ್ಚುವರಿ ಡೋಸ್ ಲಸಿಕೆಗಳನ್ನು ನೀಡಲು ಪರಿಗಣಿಸಬಹುದು‘ ಎಂದು ವಿನಿತಾ ಅಭಿಪ್ರಾಯಟ್ಟಿದ್ದಾರೆ.

‘ಒಂದು ನೆನಪಿಡಬೇಕಾದ ಅಂಶವೆಂದರೆ, ಈ ಹೆಚ್ಚುವರಿ ಡೋಸ್‌ ಲಸಿಕೆಗಳು, ನಿರ್ದಿಷ್ಟ ಹಾಗೂ ಹೆಚ್ಚು ಅಪಾಯ ತಂದೊಡ್ಡುವ ರೂಪಾಂತರ ಸೋಂಕಿನ ಮೇಲೆ ಪರಿಣಾಮ ಬೀರುವುದಿಲ್ಲ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT