ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಜತೆ ಮಾತುಕತೆ ಇಲ್ಲ, ಮೋದಿ ಸರ್ಕಾರ ಭಯೋತ್ಪಾದನೆ ಸಹಿಸಲ್ಲ: ಅಮಿತ್ ಶಾ

Last Updated 5 ಅಕ್ಟೋಬರ್ 2022, 9:53 IST
ಅಕ್ಷರ ಗಾತ್ರ

ಶ್ರೀನಗರ: ನೆರೆರಾಷ್ಟ್ರ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಮೂರು ದಿನಗಳ ಕಾಶ್ಮೀರ ಪ್ರವಾಸ ಕೈಗೊಂಡಿರುವ ಅಮಿತ್ ಶಾ, ಇಂದು ಬಾರಾಮುಲ್ಲಾದಲ್ಲಿ ರಾಜಕೀಯ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಬದಲಾಗಿ ಭಯೋತ್ಪಾದನೆ ಕೊನೆಗೊಳಿಸಲು, ಅಳಿಸಿಹಾಕಲು ಬಯಸುತ್ತದೆ. ನಾವು (ಬಿಜೆಪಿ) ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಅತ್ಯಂತ ಶಾಂತಿಯುತ ಸ್ಥಳವನ್ನಾಗಿ ಮಾಡಲು ಬಯಸುತ್ತೇವೆ’ ಎಂದು ಶಾ ಭರವಸೆ ನೀಡಿದ್ದಾರೆ.

1990ರ ದಶಕದಿಂದ ಈವರೆಗೆ ಜಮ್ಮು –ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದಾಗಿ 42,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಯೋತ್ಪಾದನೆಯಿಂದ ಯಾರಿಗಾದರೂ ಪ್ರಯೋಜನವಾಗಿದೆಯೇ ಎಂದು ಶಾ ಪ್ರಶ್ನಿಸಿದ್ದಾರೆ.

‘ಕೆಲವರು ನಾವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳುತ್ತಾರೆ. ನಾವೇಕೆ ಪಾಕಿಸ್ತಾನದೊಂದಿಗೆ ಮಾತನಾಡಬೇಕು? ನಾವು ಮಾತನಾಡುವುದಿಲ್ಲ. ನಾವು ಬಾರಾಮುಲ್ಲಾದ ಜನರೊಂದಿಗೆ ಮಾತನಾಡುತ್ತೇವೆ, ನಾವು ಕಾಶ್ಮೀರದ ಜನರೊಂದಿಗೆ ಮಾತನಾಡುತ್ತೇವೆ’ ಎಂದು ಶಾ ಕಿಡಿಕಾರಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯಾಗದೆ ಇರುವುದಕ್ಕೆ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ನೆಹರು-ಗಾಂಧಿ (ಕಾಂಗ್ರೆಸ್) ಅವರ ಕುಟುಂಬಸ್ಥರೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಲವರು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಆದರೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಎಷ್ಟು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದೆ ಎಂಬುದನ್ನು ತಿಳಿಯಲು ಬಯಸಿದ್ದೇನೆ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಶಾ, ‘ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದೆ ಎಂದು ನಾವು ಖಚಿತಪಡಿಸಿದ್ದೇವೆ’ ಎಂದು ತಿರುಗೇಟು ನೀಡಿದ್ದಾರೆ.

ಮುಫ್ತಿ ಮತ್ತು ಕಂಪನಿ, ಅಬ್ದುಲ್ಲಾ ಮತ್ತು ಪುತ್ರರು ಹಾಗೂ ಕಾಂಗ್ರೆಸ್, ಜಮ್ಮು ಮತ್ತು ಕಾಶ್ಮೀರದ ಜನರ ಕಲ್ಯಾಣಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಶಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT