ಮಂಗಳವಾರ, ಜನವರಿ 25, 2022
28 °C
ಸೋಂಕು ಹೆಚ್ಚಳ: ಕೋವಿಡ್‌ ಮಾರ್ಗಸೂಚಿ ಪಾಲಿಸಲು ಜನರಿಗೆ ಕೇಂದ್ರ ಸರ್ಕಾರದ ಸೂಚನೆ

ಓಮೈಕ್ರಾನ್‌ನಿಂದಲೇ ಮೂರನೇ ಅಲೆ: ಕೋವಿಡ್‌ ಮಾರ್ಗಸೂಚಿ ಪಾಲಿಸಲು ಕೇಂದ್ರ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ವೈರಾಣುವಿನ ಹೊಸ ರೂಪಾಂತರಿ ತಳಿ ಓಮೈಕ್ರಾನ್‌ ಸೋಂಕು ವೇಗವಾಗಿ ಹರಡುತ್ತಿದ್ದು ಎಲ್ಲಾ ರಾಜ್ಯಗಳಲ್ಲೂ ಕೋವಿಡ್‌–19 ಮೂರನೇ ಅಲೆಗೆ ಕಾರಣವಾಗುತ್ತಿದೆ ಎಂದು ಇತ್ತೀಚಿನ ಅಂಕಿಅಂಶಗಳನ್ನು ಆಧರಿಸಿ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. 

ಕೆಲವೇ ದಿನಗಳ ಕೆಳಗೆ ದೇಶದ ಪೂರ್ವಭಾಗದಲ್ಲಿ ಮಾತ್ರ ಓಮೈಕ್ರಾನ್‌ ಸೋಂಕಿನ ಕಾರಣ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳವಾಗಿತ್ತು. ಪಶ್ಚಿಮ ಬಂಗಾಳ, ಛತ್ತೀಸಗಡ ಮತ್ತು ಒಡಿಶಾ ಸೇರಿ ಈಶಾನ್ಯ ಭಾಗದ ರಾಜ್ಯಗಳಲ್ಲಿ ಡೆಲ್ಟಾ ತಳಿ ಸೋಂಕು ಪ್ರಮುಖವಾಗಿ ಕಂಡುರುತ್ತಿತ್ತು. ಆದರೆ ಈಶಾನ್ಯ ರಾಜ್ಯಗಳಲ್ಲೂ ಓಮೈಕ್ರಾನ್‌ ‌ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿ ಆಗಿವೆ. ಕೋವಿಡ್‌–19 ಮೂರನೇ ಅಲೆ ಓಮೈಕ್ರಾನ್‌ ತಳಿಯಿಂದಲೇ ಬರುತ್ತದೆ ಎಂದು ಈ ಎಲ್ಲಾ ಕಾರಣಗಳಿಂದಾಗಿ ಹೇಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. 

ಒಂದೇ ದಿನದಲ್ಲಿ 1.41 ಲಕ್ಷ ಕೋವಿಡ್‌ ಪ್ರಕರಣಗಳು ದೇಶದಲ್ಲಿ ಪತ್ತೆ ಆಗಿವೆ. ಶನಿವಾರದ ಹೊತ್ತಿಗೆ ದೇಶದಲ್ಲಿ ಒಟ್ಟು 3.53 ಕೋಟಿ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ದತ್ತಾಂಶ ಹೇಳಿದೆ.

ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲು ಜನರಿಗೆ ಸರ್ಕಾರ ಸೂಚನೆ ನೀಡಿದೆ.

ಆಸ್ಪತ್ರೆ ಸೇರಿ ಇತರ ಮೂಲಸೌಕರ್ಯಗಳ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ.

‘ಎರಡು ಕೋಟಿ ಮಕ್ಕಳಿಗೆ ಲಸಿಕೆ’‌

15ರಿಂದ 18 ವರ್ಷದೊಳಗಿನ ಸುಮಾರು ಎರಡು ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಿಡ್‌–19 ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ
ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು ಶನಿವಾರ ತಿಳಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ನನ್ನ ಯುವ ಮಿತ್ರರೇ, ಇದು ಉತ್ತಮ ಬೆಳವಣಿಗೆ. ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಆರಂಭಿಸಿ ಒಂದು ವಾರ ಕಳೆಯುವುದರಲ್ಲಿ 15ರಿಂದ 18 ವರ್ಷದೊಳಗಿನ ಸುಮಾರು ಎರಡು ಕೋಟಿ ಯುವಜನರು ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ’ ಎಂದಿದ್ದಾರೆ.

ಕಳೆದ 24 ಗಂಟೆಗಳಲ್ಲಿ 90.59 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈ ವರೆಗೆ 150.61 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಅವರು ಹೇಳಿದರು. 

ಆರೋಗ್ಯ ಸಚಿವಾಲಯದ ಪ್ರಕಾರ, ದೇಶದ ಶೇ 91ಕ್ಕಿಂತ ಹೆಚ್ಚು ವಯಸ್ಕರು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇ 66ರಷ್ಟು ವಯಸ್ಕರು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ.

***

l ಕೋವಿಡ್‌ ಹರಡುವಿಕೆಯ ಪ್ರಮಾಣವನ್ನು ಸೂಚಿಸುವ  ಆರ್‌ ನಾಟ್‌ ಮೌಲ್ಯ ಅಥವಾ ಆರ್‌ಒ ಸಂಖ್ಯೆಯು ಈ ವಾರ 4ಕ್ಕೆ ಏರಿದೆ ಎಂದು ಐಐಟಿ ಮದ್ರಾಸ್‌ನ ತಜ್ಞರು ನಡೆಸಿದ ವಿಶ್ಲೇಷಣೆ ಹೇಳಿದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ಸೋಂಕು ಎಷ್ಟು ಜನರಿಗೆ ಹರಡುತ್ತದೆ ಎಂಬುದನ್ನು ಆರ್‌ಒ ಸಂಖ್ಯೆಯು ಸೂಚಿಸುತ್ತದೆ. ಕಳೆದ ವಾರ (ಕಳೆದ ಡಿಸೆಂಬರ್‌ 25ರಿಂದ 31) ಈ ಸಂಖ್ಯೆಯು 2.9 ಇತ್ತು.  ಆರ್‌ಒ ಸಂಖ್ಯೆಯು 4ಕ್ಕೆ ಏರಿದೆ ಎಂಬುದು ಕೋವಿಡ್‌ ತೀವ್ರವಾಗಿ ಹರಡುತ್ತಿದೆ ಎಂಬುದರ ಸೂಚನೆ

l ಓಮೈಕ್ರಾನ್‌ ಸೋಂಕಿನ ವಿರುದ್ಧ ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಅಥವಾ ಬೂಸ್ಟರ್‌ ಡೋಸ್‌ ಅತ್ಯಂತ ಹೆಚ್ಚು ರಕ್ಷಣೆ ಒದಗಿಸುತ್ತದೆ ಎಂದು ಬ್ರಿಟನ್‌ನ ಯುಕೆ ಹೆಲ್ತ್‌ ಸೆಕ್ಯುರಿಟಿ ಏಜೆನ್ಸಿ ನಡೆಸಿದ ವಿಶ್ಲೇಷಣೆಯು ಕಂಡುಕೊಂಡಿದೆ 

lಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್‌ ಸಾಧ್ಯತೆ ಇಲ್ಲ. ಪೂರ್ಣ ಲಾಕ್‌ಡೌನ್‌ ಹೇರಿಕೆಯಾದರೆ ಅದು ಜನರ ದೈನಂದಿನ ಜೀವನವನ್ನು ಬಾಧಿಸುತ್ತದೆ ಎಂದು  ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಶನಿವಾರ ಹೇಳಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು