ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆ ಮಾಡುವವರಿಗೆ ಮಾತ್ರ ಕನಸು ಬೀಳುತ್ತದೆ: ಅಖಿಲೇಶ್ ವಿರುದ್ಧ ಮೋದಿ ವಾಗ್ದಾಳಿ

Last Updated 31 ಜನವರಿ 2022, 12:15 IST
ಅಕ್ಷರ ಗಾತ್ರ

ಲಖನೌ: ನಿದ್ದೆ ಮಾಡುವವರಿಗೆ ಮಾತ್ರ ಕನಸು ಬೀಳುತ್ತದೆ, ಎಚ್ಚರವಾಗಿರುವ ಮತ್ತು ಜಾಗೃತರಾದವರಿಗೆ ಅಲ್ಲ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಅವರು ವರ್ಚುವಲ್ ಆಗಿ ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ, ಜನರು ಬಹಳಷ್ಟು ಕನಸು ಕಾಣುತ್ತಿದ್ದಾರೆ, ನಿದ್ದೆ ಮಾಡುವವರು ಮಾತ್ರ ಕನಸು ಕಾಣುತ್ತಾರೆ’ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ಕಿಡಿಕಾರಿದರು.

ನನ್ನ ಕನಸಿನಲ್ಲಿ ಶ್ರೀಕೃಷ್ಣ ಪರಮಾತ್ಮ ಕಾಣಿಸಿಕೊಂಡು ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ರಚಿಸುವುದಾಗಿ ಮತ್ತು 'ರಾಮ ರಾಜ್ಯ' ಸ್ಥಾಪಿಸುವುದಾಗಿ ಹೇಳಿದ್ದರು ಎಂದು ಕೆಲ ವಾರಗಳ ಹಿಂದೆ ಅಖಿಲೇಶ್ ಯಾದವ್ ಹೇಳಿದ್ದರು. ಅಖಿಲೇಶ್ ಅವರ ಕನಸಿನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಆದಿತ್ಯನಾಥ್, ‘ಅಧಿಕಾರದಲ್ಲಿದ್ದಾಗ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡುವಾಗ ಶ್ರೀಕೃಷ್ಣ ಅವರನ್ನು (ಸಮಾಜವಾದಿ ಪಕ್ಷ) ಶಪಿಸಿರಬೇಕು’ಎಂದು ಕುಟುಕಿದ್ದರು.

‘ಐದು ವರ್ಷಗಳ ಹಿಂದೆ, ಉತ್ತರ ಪ್ರದೇಶದಲ್ಲಿ ದಬಾಂಗ್ (ಬಲಶಾಲಿಗಳು) ಮತ್ತು ದಂಗೈ (ಗಲಭೆಕೋರರು) ಹೆಚ್ಚು ಚಟುವಟಿಕೆಯಿಂದ ಇದ್ದರು. ಅವರ ಮಾತುಗಳನ್ನು ಸರ್ಕಾರದ ಆದೇಶದಂತೆ ಪರಿಗಣಿಸಲಾಗಿತ್ತು. ಪಶ್ಚಿಮ ಯುಪಿಯ ಜನರು ಈ ಪ್ರದೇಶವು ಗಲಭೆಯಲ್ಲಿ ಹೊತ್ತಿ ಉರಿಯುತ್ತಿದ್ದಾಗ ಸರ್ಕಾರ ಸಂಭ್ರಮಿಸುತ್ತಿದ್ದದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ಎಂದು ನರೇಂದ್ರ ಮೋದಿ ಹೇಳಿದರು.

ಐದು ವರ್ಷಗಳ ಹಿಂದೆ ಜನ ವಲಸೆ ಹೋಗುವ ಸುದ್ದಿ ದಿನಕ್ಕೊಂದು ಬರುತ್ತಿತ್ತು. ಅಪಹರಣ ಮತ್ತು ಸುಲಿಗೆ ಮಧ್ಯಮ ವರ್ಗದವರ ಮತ್ತು ವ್ಯಾಪಾರಿಗಳ ಬದುಕನ್ನು ಹಾಳು ಮಾಡಿತ್ತು ಎಂದು ಅವರು ಹೇಳಿದರು.

ಭಾರಿ ಜನಾದೇಶದೊಂದಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಮೋದಿ ಮತದಾರರನ್ನು ಒತ್ತಾಯಿಸಿದರು. ‘ನಾವು ಉತ್ತರ ಪ್ರದೇಶದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದೇವೆ. ಮತ್ತೊಂದೆಡೆ, ಅವರು (ವಿರೋಧ ಪಕ್ಷಗಳು) ನಿಮ್ಮ ಮೇಲೆ (ಸಾರ್ವಜನಿಕರು) ಸೇಡು ತೀರಿಸಿಕೊಳ್ಳಲು ಅವಕಾಶವನ್ನು ಹುಡುಕುತ್ತಿದ್ದಾರೆ. ಸೇಡು ತೀರಿಸಿಕೊಳ್ಳುವುದು ಅವರ ಸಿದ್ಧಾಂತವಾಗಿದೆ’ಎಂದು ಪ್ರಧಾನಿ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT