ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ಬಂದರು ಪ್ರಾಧಿಕಾರ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ

Last Updated 10 ಫೆಬ್ರುವರಿ 2021, 12:55 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ನವಮಂಗಳೂರು ಬಂದರು ಸೇರಿದಂತೆ ದೇಶದ 12 ಪ್ರಮುಖ ಬಂದರುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದ ‘ಪ್ರಮುಖ ಬಂದರುಗಳ ಪ್ರಾಧಿಕಾರ ಮಸೂದೆ 2020’ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಬುಧವಾರ ಸಂಸತ್‌ನಲ್ಲಿ ಅಂಗೀಕಾರವಾಗಿದೆ.

2020ರ ಸೆಪ್ಟೆಂಬರ್‌ 23ರಂದು ಲೋಕಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ಸಿಕ್ಕಿತ್ತು. ರಾಜ್ಯಸಭೆಯಲ್ಲಿ ಈ ಮಸೂದೆಯ‌ ಪರವಾಗಿ 84 ಮತ ಚಲಾವಣೆಯಾದರೆ, ವಿರುದ್ಧವಾಗಿ 44 ಮತ ಬಿದ್ದವು.

‘ಪ್ರಮುಖ ಬಂದರುಗಳ ಖಾಸಗೀಕರಣದ ಉದ್ದೇಶ ಈ ಮಸೂದೆಯಲ್ಲಿಲ್ಲ. ಖಾಸಗಿ ಬಂದರುಗಳೊಂದಿಗೆ ಪೈಪೋಟಿ ನಡೆಸಲು ಪ್ರಮುಖ ಬಂದರುಗಳಿಗೆ ಸ್ವಾಯತ್ತತೆ ನೀಡುವುದು ಈ ಮಸೂದೆಯ ಉದ್ದೇಶವಾಗಿದೆ. ಈ ಬಂದರುಗಳ ನಿಯಂತ್ರಣ ಮತ್ತು ನಿರ್ವಹಣೆಯ ಮೇಲೆ ಪ್ರಾಧಿಕಾರದ ಅಧಿಕಾರಿಗಳು ನಿಗಾವಹಿಸಲಿದ್ದಾರೆ ಅಷ್ಟೆ’ ಎಂದು ಹಡಗು ಮತ್ತು ಜಲಮಾರ್ಗ ಸಚಿವ ಮನಸುಖ್‌ ಎಲ್‌. ಮಾಂಡವೀಯ ಸ್ಪಷ್ಟಪಡಿಸಿದ್ದಾರೆ.

ದೇಶದ ಪ್ರಮುಖ 12 ಬಂದರುಗಳೆಂದರೆ ದೀನ್‌ದಯಾಳ್‌ (ಮೊದಲಿದ್ದ ಹೆಸರು ಕಾಂಡ್ಲಾ), ಮುಂಬೈ, ಜೆಎನ್‌ಪಿಟಿ, ಮರ್ಮಾಗೋವಾ, ನವಮಂಗಳೂರು, ಕೊಚ್ಚಿ,ಚೆನ್ನೈ, ಕಾಮರಾಜರ್‌ (ಹಿಂದಿನ ಹೆಸರು ಎಣ್ಣೊರೆ), ವಿ.ಒ. ಚಿದಂಬರನಾರ್, ವಿಶಾಖಪಟ್ಟಣಂ, ಪಾರದೀಪ್ ಮತ್ತು ಕೋಲ್ಕತ್ತ ಬಂದರು. ಕಳೆದ ವರ್ಷ ಈ ಬಂದರುಗಳು 705 ದಶಲಕ್ಷ ಮೆಟ್ರಿಕ್ ಟನ್‌ ಸರಕು ಸಾಗಣೆಯನ್ನು ನಿರ್ವಹಿಸಿವೆ.

ವಿರೋಧ ಪಕ್ಷಗಳ ವಿರೋಧ:ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಆರ್‌ಜೆಡಿ, ಡಿಎಂಕೆ, ಸಿಪಿಐಎಂ ಹಾಗೂ ಸಿಪಿಐ ಪಕ್ಷಗಳು ರಾಜ್ಯಸಭೆಯಲ್ಲಿ ಬುಧವಾರ ಪ್ರಮುಖ ಬಂದರುಗಳ ಪ್ರಾಧಿಕಾರ ಮಸೂದೆಗೆ ವಿರೋಧ ವ್ಯಕ್ತಪಡಿಸಿದವು.

‘ಇದು ಪ್ರಮುಖ ಬಂದರುಗಳನ್ನು ಖಾಸಗೀಕರಣಗೊಳಿಸುವ ಮತ್ತು ಬಂದರುಗಳ ಭೂ ಬಳಕೆಯ ಮೇಲೆ ರಾಜ್ಯಗಳು ಹೊಂದಿರುವ ಅಧಿಕಾರವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ’ ಎಂದು ಆರೋಪಿಸಿವೆ.

‘ಈ ಮಸೂದೆಯ ಹಿಂದೆ ಕಾಣದ ಕೈಗಳು ಮತ್ತು ಮಿದುಳು ಇದೆ. ಸಚಿವರು ಇದರಲ್ಲಿ ಮುಗ್ಧರಿದ್ದು, ಅಸಹಾಯಕರಾಗಿದ್ದಾರೆ. ಬಂದರುಗಳ ಎಲ್ಲ ಆಸ್ತಿಯನ್ನು ಒಂದು ಕಂಪನಿಗೆ ಅದು ಅದಾನಿ ಮತ್ತು ಅವರ ಕಂಪನಿಗೆ ವಹಿಸುವ ಹುನ್ನಾರವಿದು. ನಮ್ಮೆಲ್ಲರ ಭೂಮಿ ಅದಾನಿಯವರ ಭೂಮಿಯಾಗಲಿದೆ’ ಎಂದು ಸಿಪಿಐ ಪಕ್ಷದ ಸಂಸದ ಬಿನಾಯ್‌ ವಿಶ್ವಂ ಕಟುವಾಗಿ ಟೀಕಿಸಿದ್ದಾರೆ.

ಬಿಜೆಡಿ, ಜೆಡಿಯು ಹಾಗೂ ವೈಎಸ್‌ಆರ್‌ಸಿಪಿ ಪಕ್ಷಗಳು ಈ ಮಸೂದೆಗೆ ಬಂಬಲ ವ್ಯಕ್ತಪಡಿಸಿದ್ದು, ಬಂದರುಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದ ಮಸೂದೆ ಸ್ವಾಗತಾರ್ಹ ಎಂದಿವೆ.

ಕೈದಿಗಳಲ್ಲಿ ಶೇ 65ರಷ್ಟು ಎಸ್‌ಸಿ, ಎಸ್‌ಟಿ, ಒಬಿಸಿಯವರು

ದೇಶದಾದ್ಯಂತ ಜೈಲುಗಳಲ್ಲಿರುವ ಒಟ್ಟು ಕೈದಿಗಳಲ್ಲಿ ಶೇ 65.90ರಷ್ಟು ಕೈದಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಹೇಳಿವೆ.

ಸಂಸತ್‌ನಲ್ಲಿ ಬುಧವಾರ ಕೇಂದ್ರ ಸರ್ಕಾರ ಮುಂದಿಟ್ಟ ಅಂಕಿಅಂಶದ ಪ್ರಕಾರ, ದೇಶದ ಜೈಲುಗಳಲ್ಲಿ 4,78,600 ಕೈದಿಗಳಿದ್ದು, ಇದರಲ್ಲಿ 3,15,409 ಕೈದಿಗಳು ಎಸ್‌ಸಿ, ಎಸ್‌ಟಿ, ಒಬಿಸಿಯವರಾಗಿದ್ದಾರೆ. ಒಟ್ಟು ಕೈದಿಗಳಲ್ಲಿ ಪುರುಷ ಕೈದಿಗಳ ಸಂಖ್ಯೆ ಶೇ 95.83ರಷ್ಟಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)2019ರ ಡಿಸೆಂಬರ್ 31ರವರೆಗೆ ಸಂಗ್ರಹಿಸಿರುವ ದತ್ತಾಂಶವನ್ನು ಆಧರಿಸಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು,ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಕೇಳಿದ್ದ ಪ್ರಶ್ನೆಗೆ ಈ ಮಾಹಿತಿಯನ್ನು ಲಿಖಿತ ಉತ್ತರವಾಗಿ ನೀಡಿದ್ದಾರೆ.

ದೇಶದಲ್ಲಿ 66 ಸಾವಿರ ಮಲಹೊರುವ ಕಾರ್ಮಿಕರು

ಉತ್ತರ ಪ್ರದೇಶದಲ್ಲಿರುವ 37,379 ಮಲಹೊರುವ ಕಾರ್ಮಿಕರು ಸೇರಿದಂತೆ ದೇಶದಾದ್ಯಂತ ಒಟ್ಟು 66 ಸಾವಿರ ಮಂದಿ ಮಲ ಹೊರುವ ಪದ್ಧತಿಯಲ್ಲಿ ತೊಡಗಿರುವ ಕಾರ್ಮಿಕರಿದ್ದಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್‌ ಅಠಾವಳೆ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಒಟ್ಟು 340 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸಚಿವರು ಬುಧವಾರ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಯೋತ್ಪಾದನೆ ಪ್ರಕರಣಗಳಲ್ಲಿ 5,922 ಬಂಧನ

ದೇಶದ ವಿವಿಧ ಭಾಗಗಳಲ್ಲಿ 2016ರಿಂದ 2019ರವರೆಗೆದೇಶದ್ರೋಹ ಮತ್ತು ಭಯೋತ್ಪಾದನೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ 5,922 ಜನರನ್ನು ಬಂಧಿಸಲಾಗಿದೆ. ಈ ಅವಧಿಯಲ್ಲಿ 132 ಮಂದಿ ಖುಲಾಸೆಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್‌ನಲ್ಲಿ ತಿಳಿಸಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್‌ ರೆಡ್ಡಿ, ಎನ್‌ಸಿಆರ್‌ಬಿಯ ಇತ್ತೀಚಿನ ಮಾಹಿತಿ ಪ್ರಕಾರ 2019ರಲ್ಲಿ ಯುಎಪಿಎ ಕಾಯ್ದೆಯಡಿ 1,948 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT