ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೊಂದಿಗೆ ಮತ್ತೆ ಮಾತುಕತೆ ನಡೆಯಬೇಕು ಎಂದು ಪ್ರತಿಪಾದಿಸಿದ ಪಾಕ್ ವಿದೇಶಾಂಗ ಸಚಿವ

Last Updated 16 ಜೂನ್ 2022, 13:40 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಭಾರತದೊಂದಿನ ಮಾತುಕತೆಯನ್ನು ಪುನರ್‌ಸ್ಥಾಪಿಸುವ ಅಗತ್ಯವನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಅವರು ಗುರುವಾರ ಬಲವಾಗಿ ಪ್ರತಿಪಾದಿಸಿದ್ದಾರೆ. ‘ಪಾಕಿಸ್ತಾನ ಈಗಾಗಲೇ ಅಂತರರಾಷ್ಟ್ರೀಯವಾಗಿ ಪ್ರತ್ಯೇಕಗೊಂಡಿದೆ ಮತ್ತು ನಿರ್ಲಿಪ್ತವಾಗಿದೆ. ಭಾರತದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿ, ಪಾಕ್‌ನ ಹಿತಾಸಕ್ತಿಗಳನ್ನು ಕಾಪಾಡಲು ಸಾಧ್ಯವಾಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಸ್ಲಾಮಾಬಾದ್‌ನ ‘ಇನ್‌ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್‌’ನ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಬಿಲಾವಲ್, ‘ಭಾರತದೊಂದಿಗೆ ನಮಗೆ ತಕರಾರುಗಳಿವೆ. ಪಾಕಿಸ್ತಾನ ಮತ್ತು ಭಾರತವು ಯುದ್ಧ, ಸಂಘರ್ಷದ ದೀರ್ಘ ಇತಿಹಾಸವನ್ನೂ ಹೊಂದಿವೆ. ಇಂದೂ ನಮ್ಮ ನಡುವೆ ಗಂಭೀರವಾದ ವಿವಾದಗಳಿವೆ. ಆಗಸ್ಟ್ 2019ರ ಘಟನೆಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ’ ಎಂದೂ ಅವರು ಹೇಳಿದರು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ಭಾರತ 2019ರ ಆಗಸ್ಟ್‌ 5ರಂದು ರದ್ದು ಮಾಡಿತ್ತು. ಭಾರತದ ಈ ನಿರ್ಧಾರ ಪಾಕಿಸ್ತಾನವನ್ನು ಕೆರಳಿಸಿತ್ತು. ಹೀಗಾಗಿ, ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿಗೊಳಿಸಿದ್ದ ಪಾಕಿಸ್ತಾನ, ಭಾರತೀಯ ರಾಯಭಾರಿಯನ್ನು ದೇಶದಿಂದ ಹೊರಹಾಕಿತ್ತು.

ಕಾಶ್ಮೀರ ವಿಷಯದ ಕುರಿತು ಮಾತನಾಡಿರುವ ಬಿಲಾವಲ್ ’ನಾನು ವಿದೇಶಾಂಗ ಸಚಿವನಾದ ನಂತರ ನಡೆಸಿದ ಯಾವುದೇ ಸಂಭಾಷಣೆಯ ಮೂಲ ಕಾಶ್ಮೀರದ ವಿಷಯವೇ ಆಗಿದೆ’ ಎಂದು ಅವರು ಹೇಳಿದ್ದಾರೆ. 33 ವರ್ಷದ ಬಿಲಾವಲ್‌ ಕಳೆದ ಏಪ್ರಿಲ್‌ನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

‘ಮೇ ತಿಂಗಳಲ್ಲಿ, ನಾವು ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ವರದಿಯನ್ನು ಕಂಡಿದ್ದೇವೆ. ಇದರ ಜೊತೆಗೆ ಅಲ್ಲಿನ (ಭಾರತದ) ಅಧಿಕಾರಿಗಳ ಇಸ್ಲಾಮೋಫೋಬಿಯ ಹೇಳಿಕೆಗಳು ರಾಜತಾಂತ್ರಿಕ ಮಾತುಕತೆಗಳನ್ನು ಕಠಿಣವಾಗಿಸಿವೆ’ ಎಂದು ಅವರು ಹೇಳಿದರು.

‘ಪಾಕಿಸ್ತಾನದ ವಿದೇಶಾಂಗ ಸಚಿವನಾಗಿ, ನನ್ನ ದೇಶದ ಪ್ರತಿನಿಧಿಯಾಗಿ, ಭಾರತ ಸರ್ಕಾರದೊಂದಿಗೆ ಮಾತನಾಡದೇ, ಭಾರತೀಯರೊಂದಿಗೆ ಮಾತನಾಡದೇ ಪಾಕಿಸ್ತಾನದ ಉದ್ದೇಶವನ್ನು ಸಂವಹನ ಮಾಡಲು ಅಥವಾ ಪಾಕಿಸ್ತಾನದ ಉದ್ದೇಶವನ್ನು ಈಡೇರಿಸಿಕೊಳ್ಳಲು ಸಾಧ್ಯವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಹಿಂದಿನ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ದೋಷಪೂರಿತ ನೀತಿಗಳನ್ನು ಅವರು ದೂಷಿಸಿದರು. ಪಾಕಿಸ್ತಾನವು ಅಂತರರಾಷ್ಟ್ರೀಯವಾಗಿ ಒಂಟಿಯಾಗಿದೆ, ನಿರ್ಲಿಪ್ತವಾಗಿದೆ ಎಂದು ಅವರು ಆರೋಪಿಸಿದರು.

ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಲಾವಲ್ ‘ನಮಗೆ ಭಾರತದೊಂದಿಗೆ ವ್ಯಾಪಾರ ಸಂಬಂಧವಿಲ್ಲ. ಇದು ತಪ್ಪು ಎಂದು ಹಲವರು ವಾದಿಸುತ್ತಾರೆ. ಈ ವಿಮರ್ಶೆಯನ್ನು ಗಮನಿಸಿದರೆ, ನಾವು ಹಾಗೆ ಮಾಡುವುದು ಸೂಕ್ತವಲ್ಲ ಎನಿಸುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ವಾದಕ್ಕೆ ಬಿಲಾವಲ್ ಅವರು ಬೆನಜೀರ್ ಭುಟ್ಟೋ ಅವರ ಮೊದಲ ಅವಧಿ (1988)ಯ ಕ್ರಮಗಳನ್ನು ಉಲ್ಲೇಖಿಸಿದರು. ಆಗ ಪಾಕಿಸ್ತಾನವು ಭಾರತದೊಂದಿಗೆ ಆರ್ಥಿಕ ಸಂಬಂಧವನ್ನು ಉತ್ತಮಪಡಿಸಿತ್ತು. ಅದು ಎರಡೂ ದೇಶಗಳು ತೀವ್ರ ಕ್ರಮಗಳನ್ನು ಕೈಗೊಳ್ಳದಂತೆ ಮಾಡಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT