ಶನಿವಾರ, ಜನವರಿ 16, 2021
21 °C
ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ

ಮುಂಚೂಣಿ ಠಾಣೆ, ಗ್ರಾಮಗಳ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಸೇನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ, ಅಂತರರಾಷ್ಟ್ರೀಯ ಗಡಿ ಬಳಿಯ ಮುಂಚೂಣಿ ಠಾಣೆಗಳು ಹಾಗೂ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ಕಠುವಾ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿ ಸಮೀಪದ ಹೀರಾನಗರ ಸೆಕ್ಟರ್ ವ್ಯಾಪ್ತಿಯ ಪನ್ಸಾರ್, ಮನ್ಯಾರಿ ಹಾಗೂ ಕರೋಲ್‌ ಕೃಷ್ಣಾ ಪ್ರದೇಶಗಳಲ್ಲಿ ಶನಿವಾರ ರಾತ್ರಿ 9.50ರ ವೇಳೆಗೆ ಪಾಕಿಸ್ತಾನದ ಪಡೆಗಳು ಗುಂಡಿನ ದಾಳಿ ಆರಂಭಿಸಿದವು.  ಗಡಿ ಭದ್ರತಾ ಪಡೆಯ ಯೋಧರು ಪ್ರತಿ ದಾಳಿ ನಡೆಸಿ, ತಕ್ಕ ಉತ್ತರ ನೀಡಿದ್ದಾರೆ ಎಂದೂ ಅಧಿಕಾರಿಗಳು ಹೇಳಿದರು.

‘ಎರಡೂ ದೇಶಗಳ ಪಡೆಗಳ ನಡುವೆ ಭಾನುವಾರ ನಸುಕಿನ 4.15ರ ವರೆಗೂ ಗುಂಡಿನ ಚಕಮಕಿ ನಡೆಯಿತು. ನಮ್ಮ ಕಡೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ’ ಎಂದು ತಿಳಿಸಿದರು.

ಕಳೆದ ಎಂಟು ತಿಂಗಳಿನಿಂದಲೂ ಪಾಕಿಸ್ತಾನದ ಯೋಧರು ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಇದರಿಂದ ಗಡಿ ಭಾಗದ ಗ್ರಾಮಗಳ ಜನರು ಭೀತಿಯಲ್ಲಿ ದಿನ ದೂಡುವಂತಾಗಿದೆ.

‘ಅಂಗೈಯಲ್ಲಿ ಜೀವ ಹಿಡಿದುಕೊಂಡೇ ದಿನ ದೂಡುತ್ತಿದ್ದೇವೆ. ಪಾಕಿಸ್ತಾನ ನಡೆಸುವ ಗುಂಡಿನ ದಾಳಿಯಿಂದ ಪಾರಾಗುವ ಸಲುವಾಗಿ ನಾವು ಭೂಗತ ಬಂಕರ್‌ಗಳಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದೇವೆ’ ಎಂದು ಮನ್ಯಾರಿ ಗ್ರಾಮದ ಧರಮ್‌ ಪಾಲ್‌ ಹೇಳಿದರು.

‘ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಿಂದಾಗಿ ಗ್ರಾಮದ 12ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ’ ಎಂದೂ ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು