ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಸೇಡಿನ ರಾಜಕಾರಣವನ್ನು ನಾನು, ಸಿಂಗ್ ವಿರೋಧಿಸಿದ್ದೆವು: ಪವಾರ್

Last Updated 30 ಡಿಸೆಂಬರ್ 2021, 4:06 IST
ಅಕ್ಷರ ಗಾತ್ರ

ಪುಣೆ:ನಾನು ಮತ್ತು ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಸೇಡಿನ ರಾಜಕಾರಣ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆವುಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬುಧವಾರ ಹೇಳಿದ್ದಾರೆ.

ಮರಾಠಿ ದೈನಿಕ 'ಲೋಕಸತ್ತಾ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪವಾರ್, ಮನಮೋಹನ್ ಸಿಂಗ್ ಆಡಳಿತದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಹಿಂದಿನ ಯುಪಿಎ ಸರ್ಕಾರದಲ್ಲಿ ನನ್ನನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸಚಿವರು ಇರಲಿಲ್ಲ ಎಂದಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ (2004-2014) ಪವಾರ್ ಕೃಷಿ ಸಚಿವರಾಗಿದ್ದರು.

ಕೇಂದ್ರೀಯ ಸಂಸ್ಥೆಗಳು ಮತ್ತು ಆಗಿನ ಕೇಂದ್ರ ಸರ್ಕಾರವು ಮೋದಿ ಬೆನ್ನು ಬಿದ್ದಿದ್ದಾಗ ಅವರು ಸಿಎಂ ಆಗಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನೀವು ಮತ್ತು ಸಿಂಗ್ ಅಭಿಪ್ರಾಯಪಟ್ಟಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪವಾರ್, ‘ಮೋದಿಜಿ ಗುಜರಾತ್ ಸಿಎಂ ಆಗಿದ್ದಾಗ ನಾನು ಕೇಂದ್ರದಲ್ಲಿದ್ದೆ. ಪ್ರಧಾನಿ ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆದಾಗ, ಮೋದಿಜಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳ ಗುಂಪನ್ನು ಮುನ್ನಡೆಸುತ್ತಿದ್ದರು ಮತ್ತು ಕೇಂದ್ರದ ಮೇಲೆ ದಾಳಿ ನಡೆಸುತ್ತಿದ್ದರು. ಹಾಗಾಗಿ, ಅಂತಹ ಪರಿಸ್ಥಿತಿಯಲ್ಲಿ ಮೋದಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ತಂತ್ರ ರೂಪಿಸುತ್ತಿದ್ದೆವು. ಯುಪಿಎ ಸರ್ಕಾರದಲ್ಲಿ ನನ್ನನ್ನು ಹೊರತುಪಡಿಸಿ ಮೋದಿಜಿ ಅವರೊಂದಿಗೆ ಮಾತುಕತೆ ನಡೆಸಲು ಬೇರಾವ ಮಂತ್ರಿಯೂ ಇರಲಿಲ್ಲ,’ಎಂದು ರಾಜ್ಯಸಭಾ ಸದಸ್ಯ ಶರದ್ ಪವಾರ್ ಹೇಳಿದರು.

‘ಮೋದಿ ಮತ್ತು ಅವರ ಪಕ್ಷ ಬಿಜೆಪಿ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಅವರು ಮುಖ್ಯಮಂತ್ರಿ ಎಂಬುದನ್ನು ಯಾರೂ ಮರೆಯಬಾರದು, ಅವರು ಒಂದು ರಾಜ್ಯದ ಸಿಎಂ ಮತ್ತು ಜನರು ಜನಾದೇಶ ನೀಡಿದ್ದಾರೆ ಎಂದು ನಾನು ಯುಪಿಎ ಆಂತರಿಕ ಸಭೆಗಳಲ್ಲಿ ಹೇಳುತ್ತಿದ್ದೆ. ಅವರು ಸಮಸ್ಯೆಗಳೊಂದಿಗೆ ಬಂದಾಗ, ಅವುಗಳು ಬಗೆಹರಿಯುವಂತೆ ನೋಡಿಕೊಳ್ಳುವುದು ಮತ್ತು ಅವರ ರಾಜ್ಯದ ಜನರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ರಾಷ್ಟ್ರೀಯ ಕರ್ತವ್ಯವಾಗಿತ್ತು’ ಎಂದು ಪವಾರ್ ಹೇಳಿದರು. ಆಗಿನ-ಪಿಎಂ ಮನಮೋಹನ್ ಸಿಂಗ್ ಸಹ ನನ್ನ ಅಭಿಪ್ರಾಯವನ್ನು ಬೆಂಬಲಿಸಿದ್ದರು ಎಂದು ಹೇಳಿದ್ಧಾರೆ.

‘ಗುಜರಾತಿಗೆ ಹೋಗಿ ಆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿದ್ದ ಅಂದಿನ ಏಕೈಕ ಕೇಂದ್ರ ಸಚಿವ ನಾನು. ‘ಸೇಡಿನ ರಾಜಕಾರಣ ಮಾಡಬಾರದು (ಅಂದಿನ ಸಿಎಂ ಮೋದಿ ವಿರುದ್ಧ) ಎಂದು ನಾನು ಮತ್ತು ಸಿಂಗ್ ಅಭಿಪ್ರಾಯಪಟ್ಟಿದ್ದೆವು. ನಾವು ಸ್ಥಾಪಿತ ಚೌಕಟ್ಟಿನಿಂದ (ಆಡಳಿತದ) ಹೊರಗೆ ಹೋಗಬಾರದು ಎಂಬ ಅಭಿಪ್ರಾಯಕ್ಕೆ ಬಂದಿದ್ದೆವು. ಹಾಗಾಗಿ, ಸೇಡಿನ ರಾಜಕಾರಣವನ್ನು ಎಂದಿಗೂ ಮಾಡಲಿಲ್ಲ ಎಂದು ಪವಾರ್ ಹೇಳಿದರು. ಆದರೆ, ಯುಪಿಎ ಸರ್ಕಾರದ ಭಾಗವಾಗಿದ್ದ ಕೆಲವರು ಗುಜರಾತ್ ಸರ್ಕಾರದಲ್ಲಿದ್ದ ಕೆಲವರ ವಿರುದ್ಧ ಕಠಿಣ ನಿಲುವು ತೆಗೆದುಕೊಂಡಿದ್ದರು ಎಂದು ಎನ್‌ಸಿಪಿ ನಾಯಕ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT