ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಲಿತ’ ಪದ ಪ್ರಯೋಗ ಬಳಕೆ ತಡೆಗೆ ಸೂಚನೆ

ಪಂಜಾಬ್‌ ಸಿ.ಎಂ ನೇಮಕ ವಿಚಾರ: ರಾಜ್ಯ ಪರಿಶಿಷ್ಟ ಜಾತಿ ಆಯೋಗದಿಂದ ಆದೇಶ
Last Updated 21 ಸೆಪ್ಟೆಂಬರ್ 2021, 15:16 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬಿನ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಸಂಬಂಧಿಸಿದ ಸುದ್ದಿಗಳಲ್ಲಿ ಮಾಧ್ಯಮಗಳು ‘ದಲಿತ’ ಪದ ಬಳಸಿರುವ ಕುರಿತು ಗಮನಿಸಿರುವ, ರಾಜ್ಯ ಪರಿಶಿಷ್ಟ ಜಾತಿ ಆಯೋಗವು ಪರಿಶಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ಇಂಥ ಪದ ಬಳಸಬಾರದು ಎಂದು ಮಂಗಳವಾರ ಆದೇಶಿಸಿದೆ.

‘ದಲಿತ’ ಪದದ ಬಳಕೆಯನ್ನು ಸಂವಿಧಾನ ಅಥವಾ ಯಾವುದೇ ಶಾಸನದಲ್ಲಿ ಉಲ್ಲೇಖಿಸಿಲ್ಲ. ಅಲ್ಲದೆ, ಈ ಪದ ಬಳಸದಂತೆ ಭಾರತದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈಗಾಗಲೇ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ನಿರ್ದೇಶನ ನೀಡಿದೆ ಎಂದು ರಾಜ್ಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷೆ ತೇಜಿಂದರ್ ಕೌರ್ ಅವರು ಹೇಳಿದ್ದಾರೆ.

ಈ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್‌ನ 2018ರ ಆದೇಶವನ್ನೂ ಉಲ್ಲೇಖಿಸಿರುವ ಕೌರ್ ಅವರು, ‘ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಅದರ ಅಧೀನದಲ್ಲಿ ಕಾರ್ಯನಿರ್ವಹಿಸುವ ವಿಭಾಗಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದ ಸದಸ್ಯರಿಗೆ ‘ದಲಿತ’ ಎನ್ನುವ ಪದ ಬಳಸಬಾರದು. ಈ ಪದದ ಬಳಕೆಯು ಸಂವಿಧಾನದಲ್ಲಾಗಲೀ ಅಥವಾ ಯಾವುದೇ ಶಾಸನದಲ್ಲಾಗಲೀ ಕಂಡು ಬರುವುದಿಲ್ಲ ಎಂದು ಹೇಳಿದ್ದ ಹೈಕೋರ್ಟ್ ಆ ಪದವನ್ನು ನಿಷೇಧಿಸಲು ಸೂಚಿಸಿತ್ತು’ ಎಂದು ವಿವರಿಸಿದ್ದಾರೆ.

ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನವನ್ನು ಅನುಸರಿಸಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳಿಗೆ ‘ದಲಿತ’ ಪದದ ಬದಲಾಗಿ ‘ಪರಿಶಿಷ್ಟ ಜಾತಿ’ ಎನ್ನುವ ಪದವನ್ನು ಬಳಸುವಂತೆ ಸೂಚಿಸಿದೆ ಎಂದೂ ಅವರು ತಿಳಿಸಿದ್ದಾರೆ.

ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT