ವಾರಾಣಸಿ: ಪ್ರಧಾನಿಯಿಂದ ₹1,500 ಕೋಟಿ ಮೊತ್ತದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿನ ಐಐಟಿ– ಬಿಎಚ್‌ಯು ಮೈದಾನದಲ್ಲಿ ₹ 1,500 ಕೋಟಿ ಮೊತ್ತ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮತ್ತು ಕೆಲವು ನೂತನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಬೆಳಿಗ್ಗೆ ಆಗಮಿಸಿದ ಅವರು, ಬಿಎಚ್‌ಯುನಲ್ಲಿ 100 ಹಾಸಿಗೆಗಳ ವಿಭಾಗ, ಗೋದೌಲಿಯಲ್ಲಿ ಬಹುಮಹಡಿ ಪಾರ್ಕಿಂಗ್ ತಾಣ ಉದ್ಘಾಟಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ಗಂಗಾನದಿಯಲ್ಲಿ ರೋರೋ ದೋಣಿಗಳಿಗೆ ಚಾಲನೆ ನೀಡಿದರು. ನಂತರ ವಾರಾಣಸಿ ನಗರದಲ್ಲಿ ಗಾಜಿಯಾಪುರ ಹೆದ್ದಾರಿ ಸಂಪರ್ಕಿಸುವ ತ್ರಿಪಥ ಮೇಲು ಸೇತುವೆಯನ್ನು ಉದ್ಘಾಟಿಸಿದರು.
ಪ್ರಧಾನಿಯವರು ಸುಮಾರು ₹ 744 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದರು. ₹ 839 ಕೋಟಿ ಮೌಲ್ಯದ ಹಲವು ಲೋಕೋಪಯೋಗಿ ಇಲಾಖೆಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಉದ್ಘಾಟನೆಗೊಂಡ ಯೋಜನೆಗಳಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ (ಸಿಐಪಿಇಟಿ) ಕೌಶಲ ಮತ್ತು ತಾಂತ್ರಿಕ ನೆರವಿನ ಕೇಂದ್ರ, ಜಲ ಜೀವನ್ ಮಿಷನ್ ಅಡಿಯಲ್ಲಿ 143 ಗ್ರಾಮೀಣ ಯೋಜನೆಗಳು ಮತ್ತು ಕಾರ್ಖಿಯಾನೈನಲ್ಲಿರುವ ಮಾವು ಮತ್ತು ತರಕಾರಿ ಸಂಯೋಜಿತ ಪ್ಯಾಕ್ ಹೌಸ್ ಸೇರಿವೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಸಚಿವರು ಹಾಜರಿದ್ದರು.
ಈ ಕಾರ್ಯಕ್ರಮಗಳ ನಂತರ ನರೇಂದ್ರ ಮೋದಿಯವರು ಜಪಾನ್ ಸರ್ಕಾರದ ನೆರವಿನಿಂದ ನಿರ್ಮಾಣ ಮಾಡಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ, ’ರುದ್ರಾಕ್ಷ’ವನ್ನು ಉದ್ಘಾಟಿಸಲಿದ್ದಾರೆ. ನಂತರ ಬಿಎಚ್‌ಯುನಲ್ಲಿರುವ ಬಾಣಂತಿಯರು ಮತ್ತು ಮಕ್ಕಳ ಆರೋಗ್ಯ ವಿಭಾಗವನ್ನು ಪರಿಶೀಲಿಸಲಿದ್ದಾರೆ. ’ಕೋವಿಡ್ –19’ ಮೂರನೇ ಅಲೆ ಎದುರಿಸಲು ಕೈಗೊಂಡಿರುವ ಸಿದ್ಧತೆಯ ಪರಿಶೀಲನೆ ಕುರಿತು ಅಧಿಕಾರಿಗಳು ಮತ್ತು ವೈದ್ಯಕೀಯ ವಿಭಾಗದ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.