ಮಂಗಳವಾರ, ಅಕ್ಟೋಬರ್ 26, 2021
23 °C

ಪ್ರಧಾನಿ ಮೋದಿ ಎಲ್ಲರ ಸಲಹೆ ಆಲಿಸುವ ಪ್ರಜಾಪ್ರಭುತ್ವ ನಾಯಕ: ಅಮಿತ್‌ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಜಾಪ್ರಭುತ್ವ ನಾಯಕ ಎಂದು ಹೊಗಳಿದ್ದಾರೆ. ಹಾಗೆಯೇ, ಕೇಂದ್ರ ಸಂಪುಟವು ಮೋದಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವಂತೆ ಈ ಹಿಂದೆ ಎಂದೂ ಕಾರ್ಯಾಚರಿಸಿರಲಿಲ್ಲ ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಸಂಸದ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾ, ಮೋದಿ ಅವರು ತಮ್ಮ ಹುದ್ದೆ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಯಾರಾದರೂ ನೀಡುವ ಯೋಗ್ಯ ಸಲಹೆಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಅವರಂತಹ ತಾಳ್ಮೆಯ ಕೇಳುಗರನ್ನು ತಾವು ನೋಡಿಲ್ಲ ಎಂದಿದ್ದಾರೆ.

ಮುಂದುವರಿದು, ದೇಶದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವಾಗ ರಾಜಕೀಯ ಸವಾಲುಗಳನ್ನು ಸ್ವೀಕರಿಸಲು ಮೋದಿ ಹಿಂಜರಿಯುವುದಿಲ್ಲ. ಕೆಲವೊಮ್ಮೆ ರಾಷ್ಟ್ರದ ಹಿತಕ್ಕಾಗಿ ಕಹಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷಗಳ ʼಮೋದಿ ನಿರಂಕುಶ ನಾಯಕʼ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ʼನಾನು ಮೋದಿ ಮತ್ತು ಅವರ ಕಾರ್ಯವೈಖರಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರಂತೆ ತಾಳ್ಮೆಯಿಂದ ಕೇಳಿಸಿಕೊಳ್ಳುವವರನ್ನು ನಾನು ನೋಡಿಯೇ ಇಲ್ಲ. ಎಂತಹದೇ ವಿಚಾರವಿರಲಿ, ಅವರು ಪ್ರತಿಯೊಬ್ಬರ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ ಮತ್ತು ಕೊನೆಯಲ್ಲಿ ಮಾತನಾಡುತ್ತಾರೆ. ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಸಣ್ಣ ಅಧಿಕಾರಿ ಸೇರಿದಂತೆ ಎಲ್ಲರೂ ನೀಡಿದ ಸಲಹೆಗಳನ್ನು ಪರಿಗಣಿಸಿ ತಾಳ್ಮೆಯಿಂದ ತೀರ್ಮಾನ ಕೈಗೊಳ್ಳುತ್ತಾರೆʼ ಎಂದು ವಿವರಿಸಿದ್ದಾರೆ. 

ಮೋದಿ ಯಾವುದೇ ನಿರ್ಧಾರಗಳನ್ನು ಹೇರುವುದಿಲ್ಲ ಎಂದು ಒತ್ತಿ ಹೇಳಿರುವ ಶಾ, ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಂಪುಟವು ಪ್ರಜಾಸತ್ತಾತ್ಮಕವಾಗಿ ಕಾರ್ಯಾಚರಿಸುತ್ತಿರುವಂತೆ, ಹಿಂದೆಂದೂ ಇರಲಿಲ್ಲ ಎಂಬುದನ್ನು ಅವರೊಂದಿಗೆ ಕೆಲಸ ಮಾಡಿದವರು ಮತ್ತು ಅವರ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿ ಸಭೆಗಳಲ್ಲಿ ಸಾಮೂಹಿಕ ಸಮಾಲೋಚನೆ ನಡೆಸಿದ ನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಸರ್ಕಾರವನ್ನು ಮುನ್ನಡೆಸುವುದಕ್ಕೆ ಮಾತ್ರವಲ್ಲದೆ ದೇಶದಲ್ಲಿ ಉತ್ತಮ ಬದಲಾವಣೆಗಳನ್ನು ತರುವುದಕ್ಕಾಗಿ ಅಧಿಕಾರದಲ್ಲಿರುವುದಾಗಿ ಅವರು (ಮೋದಿ) ಯಾವಾಗಲೂ ಹೇಳುತ್ತಾರೆ ಎಂದೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು