ಗುರುವಾರ , ಜೂನ್ 24, 2021
25 °C

ರಾಜ್ಯಗಳಿಗೆ 15 ದಿನ ಮುಂಚೆ ಲಸಿಕೆ ಪೂರೈಕೆ: ಪ್ರಧಾನಿ ಮೋದಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಬೇಕಾಗುವ ಲಸಿಕೆಗಳನ್ನು 15 ದಿನ ಮುಂಚಿತವಾಗಿಯೇ ರಾಜ್ಯಗಳಿಗೆ ಪೂರೈಸಲು ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಇದರಿಂದಾಗಿ ರಾಜ್ಯಗಳು ಲಸಿಕೆ ನೀಡಿಕೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಸಿಕೆ ಪೂರೈಕೆ ಹೆಚ್ಚಿಸಲು ಶ್ರಮಿಸಲಾಗುವುದು ಎಂದೂ ಅವರು ಭರವಸೆ ಕೊಟ್ಟಿದ್ದಾರೆ.

ಲಸಿಕೆ ಕೊರತೆಗೆ ಸಂಬಂಧಿಸಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಈ ಆಶ್ವಾಸನೆ ನೀಡಿದ್ದಾರೆ.

ಓದಿ: 

ಒಂಬತ್ತು ರಾಜ್ಯಗಳ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಇರುವ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಪ್ರಧಾನಿಯವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಮಾತನಾಡಿದರು. ಈ ರಾಜ್ಯಗಳ ಮುಖ್ಯಮಂತ್ರಿಗಳೂ ಹಾಜರಿದ್ದರು. 

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ಅತ್ಯಂತ ಪ್ರಬಲ ಅಸ್ತ್ರ. ಹಾಗಾಗಿ, ಲಸಿಕೆಯ ಬಗ್ಗೆ ಇರುವ ಮಿಥ್ಯೆಗಳನ್ನು ಒಡೆದುಹಾಕುವಂತೆಯೂ ಮೋದಿ ಕರೆ ಕೊಟ್ಟಿದ್ದಾರೆ. 

ಸ್ಥಳೀಯ ಮಟ್ಟದಲ್ಲಿಯೇ ಕೋವಿಡ್‌ ನಿರ್ವಹಣೆಯ ಕಾರ್ಯತಂತ್ರಕ್ಕೆ ಸರ್ಕಾರ ಒತ್ತು ನೀಡುತ್ತಿದೆ.

ಹಾಗಾಗಿ, ಜಿಲ್ಲಾಧಿಕಾರಿಗಳು ಮತ್ತು ಮಹಾನಗರಪಾಲಿಕೆ ಅಧಿಕಾರಿಗಳ ಜತೆಗೆ ನೇರವಾಗಿ ಸಂವಹನ ನಡೆಸಲಾಗುತ್ತಿದೆ. 

ಜಿಲ್ಲಾಧಿಕಾರಿಗಳನ್ನು ‘ಕ್ಷೇತ್ರ ಸೇನಾನಿಗಳು’ (ಫೀಲ್ಡ್‌ ಕಮಾಂಡರ್‌) ಎಂದು ಮೋದಿ ಬಣ್ಣಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕೋವಿಡ್‌ ನಿರ್ವಹಣೆಗಾಗಿ ತಮ್ಮದೇ ಆದ ವಿನೂತನ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಎಲ್ಲ ಸ್ವಾತಂತ್ರ್ಯ ಇದೆ. ತಮ್ಮ ಕ್ರಮಗಳಿಂದಾಗಿ ಆಗಿರುವ ಬದಲಾವಣೆಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೇಳಿಕೊಳ್ಳಬೇಕು ಎಂದು ಸೂಚಿಸಿದರು. 

ಓದಿ: 

‘ಪ್ರತಿ ಜಿಲ್ಲೆಯೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ನಿಮ್ಮ ಜಿಲ್ಲೆ ಎದುರಿಸುತ್ತಿರುವ ಸವಾಲು
ಗಳು ನಿಮಗೆ ಚೆನ್ನಾಗಿ ತಿಳಿದಿರುತ್ತವೆ. ಹಾಗಾಗಿ, ನಿಮ್ಮ ಜಿಲ್ಲೆಯು ಗೆದ್ದರೆ ದೇಶವು ವಿಜಯಶಾಲಿಯಾಗಿ ಹೊರಹೊಮ್ಮುತ್ತದೆ. ನಿಮ್ಮ ಜಿಲ್ಲೆಯು ಕೊರೊನಾವನ್ನು ಸೋಲಿಸಿದರೆ ಇಡೀ ದೇಶವೇ ಕೊರೊನಾವನ್ನು ಸೋಲಿಸುತ್ತದೆ’ ಎಂದು ಮೋದಿ ವಿವರಿಸಿದರು. 

ಸ್ಥಳೀಯ ಮಟ್ಟದ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಿ, ಪರೀಕ್ಷೆ ಮತ್ತು ಸಂಪರ್ಕಿತರ ಪತ್ತೆಗೆ ಹೆಚ್ಚಿನ ಒತ್ತು ಕೊಡಿ, ಕೋವಿಡ್‌ ಹಿಮ್ಮೆಟ್ಟಿಸಲು ಬೇಕಾದ ಮಾಹಿತಿಯನ್ನು ಜನರಿಗೆ ಒದಗಿಸಿ ಎಂದು ಮೋದಿ ಸೂಚಿಸಿದ್ದಾರೆ. ತಲುಪುವುದಕ್ಕೇ ಕಷ್ಟವಿರುವ ಗ್ರಾಮೀಣ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಕೊರೊನಾ ತಡೆಯಬೇಕು. ಜತೆಗೆ, ನಿತ್ಯಜೀವನಕ್ಕೆ ಬೇಕಾದ ವಸ್ತುಗಳ ಪೂರೈಕೆ ನಿರಂತರವಾಗಿ ಇರುವಂತೆಯೂ ನೋಡಿಕೊಳ್ಳಬೇಕು ಎಂದು ಪ್ರಧಾನಿ ನಿರ್ದೇಶನ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು