ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮೀಬಿಯಾದಿಂದ ತಂದ ಚೀತಾಗಳನ್ನು ಬಿಡುಗಡೆ ಮಾಡಿದ ನರೇಂದ್ರ ಮೋದಿ 

Last Updated 17 ಸೆಪ್ಟೆಂಬರ್ 2022, 17:14 IST
ಅಕ್ಷರ ಗಾತ್ರ

ಶಯೋಪುರ (ಮಧ್ಯಪ್ರದೇಶ): ನಮೀಬಿಯಾದಿಂದ ತರ ಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಶನಿವಾರ ಬಿಟ್ಟರು. ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳು ನಿರ್ನಾಮವಾಗಿವೆ. ದೇಶದಲ್ಲಿ ಚೀತಾಗಳ ಸಂತತಿಯನ್ನು ಬೆಳೆಸುವ ಉದ್ದೇಶದಿಂದ ‘ಚೀತಾ ಯೋಜನೆ’ ಅಡಿ ಈ ಚೀತಾಗಳನ್ನು ತರಲಾಗಿದೆ.

ತಮ್ಮ 72ನೇ ಹುಟ್ಟುಹಬ್ಬದ ದಿನ ಚೀತಾಗಳನ್ನು ಮೋದಿ ಅವರು ಉದ್ಯಾನದಲ್ಲಿ ಬಿಟ್ಟರು. ಅವರು ವೃತ್ತಿಪರ ಕ್ಯಾಮರಾದಲ್ಲಿ ಚೀತಾಗಳ ಚಿತ್ರಗಳನ್ನೂ ಸೆರೆ ಹಿಡಿದರು.

ಒಟ್ಟು 8 ಚೀತಾಗಳನ್ನು (ಐದು ಹೆಣ್ಣು ಮತ್ತು ಮೂರು ಗಂಡು) ನಮೀಬಿಯಾದಿಂದ ಗ್ವಾಲಿಯರ್‌ಗೆ ಬೋಯಿಂಗ್ ವಿಮಾನದಲ್ಲಿ ಶನಿವಾರ ಕರೆತರಲಾಯಿತು. ಚೀತಾಗಳನ್ನು ಕರೆತರಲು ಬೇಕಾದ ರೀತಿಯಲ್ಲಿ ವಿಮಾ ನವನ್ನು ಮಾರ್ಪಾಡು ಮಾಡಲಾಗಿತ್ತು. ವನ್ಯ ಮೃಗಗಳ ಅಂತರ್ ಖಂಡ ಸ್ಥಳಾಂತರದ ಮೊದಲ ಯೋಜನೆ ಇದು.

ಶನಿವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಚಿರತೆಗಳನ್ನು ಹೊತ್ತ ವಿಮಾನವು ಗ್ವಾಲಿಯರ್‌ಗೆ ಬಂದಿಳಿ ಯಿತು. ಬಳಿಕ ಅವುಗಳನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳಲ್ಲಿ ಕುನೊ ರಾಷ್ಟ್ರೀಯ ಉದ್ಯಾನ ಸಮೀಪದ ಪಾಲ್ಪುರಕ್ಕೆ ಕರೆತರಲಾಯಿತು. ರಾಷ್ಟ್ರೀಯ ಉದ್ಯಾನದಲ್ಲಿ ವಿಶೇಷ ವೇದಿಕೆ ಸಿದ್ಧಪಡಿಸಲಾಗಿತ್ತು. ಚೀತಾ ಗಳನ್ನು ಇರಿಸಿದ್ದ ಪಂಜರಗಳನ್ನು ಅದರ ಕೆಳಗೆ ಇರಿಸಲಾಗಿತ್ತು.

ಮೋದಿ ಅವರು ಪಂಜರಗಳ ಬಾಗಿಲು ತೆರೆಯುವ ಮೂಲಕ ಮೂರು ಚೀತಾಗಳನ್ನು ಉದ್ಯಾನದೊಳಕ್ಕೆ ಬಿಟ್ಟರು. ಮಧ್ಯ‍ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್‌ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೂರು ಚೀತಾಗಳನ್ನು ಮೋದಿ ಅವರು ಉದ್ಯಾನದೊಳಕ್ಕೆ ಬಿಟ್ಟರೆ, ಉಳಿದವುಗಳನ್ನು ಇತರ ಗಣ್ಯರು ಬಿಟ್ಟರು ಎಂದು ರಾಷ್ಟ್ರೀಯ ಉದ್ಯಾನದ ವಿಭಾಗೀಯ ಅರಣ್ಯ ಅಧಿಕಾರಿ ಪಿ.ಕೆ. ವರ್ಮಾ ಹೇಳಿದ್ದಾರೆ. ಈ ಎಲ್ಲ ಚೀತಾಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ.

ಈ ರಾಷ್ಟ್ರೀಯ ಉದ್ಯಾನವು ವಿಂಧ್ಯಾಂಚಲ ಬೆಟ್ಟಗಳ ಉತ್ತರ ಭಾಗದಲ್ಲಿದೆ. 344.68 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ.

ಭಾರತದಲ್ಲಿ ಚೀತಾಗಳ ಸಂತತಿ 1947ರಲ್ಲಿಯೇ ನಾಶವಾಗಿದೆ. ಭಾರತ ದಲ್ಲಿದ್ದ ಕೊನೆಯ ಚೀತಾ ಈಗಿನ ಛತ್ತೀಸಗಡದ ಕೊರಿಯಾ ಜಿಲ್ಲೆಯಲ್ಲಿ ಮೃತಪಟ್ಟಿತು. ಆಗ ಛತ್ತೀಸಗಡವು ಮಧ್ಯ ಪ್ರದೇಶದ ಭಾಗವಾಗಿತ್ತು. ಚೀತಾಗಳು ನಿರ್ನಾಮವಾಗಿವೆ ಎಂದು 1952ರಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

ಚೀತಾ ತರಲು ಯಾರೂ ಯತ್ನಿಸಲಿಲ್ಲ: ಮೋದಿ

ಭಾರತದಲ್ಲಿ ಚೀತಾ ಸಂತತಿಯು ಏಳು ದಶಕದ ಹಿಂದೆಯೇ ನಿರ್ನಾಮವಾಗಿದ್ದರೂ ಬೇರೆ ದೇಶಗಳಿಂದ ಚೀತಾಗಳನ್ನು ಕರೆತರಲು ಗಂಭೀರ ಪ್ರಯತ್ನ ನಡೆಯಲೇ ಇಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ಹಿಂದಿನ ಸರ್ಕಾರಗಳನ್ನು ಟೀಕಿಸಿದ್ದಾರೆ.

ಚೀತಾಗಳನ್ನು ಕರೆತರುವ ಯೋಜನೆಯು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ತಮ್ಮ ಸರ್ಕಾರದ ಪ್ರಯತ್ನದ ಭಾಗ ಎಂದರು.

‘ಚೀತಾಗಳು ನಿರ್ನಾಮವಾಗಿವೆ ಎಂದು 1952ರಲ್ಲಿ ಘೋಷಿಸಿದ್ದು ದುರದೃಷ್ಟಕರ. ಆದರೆ, ಬೇರೆ ದೇಶಗಳಿಂದ ಅವುಗಳನ್ನು ತಂದು ಸಂತತಿ ಬೆಳೆಸುವ ಪ್ರಯತ್ನವು ಹಲವು ದಶಕಗಳಲ್ಲಿ ಆಗಲೇ ಇಲ್ಲ. ಆದರೆ, ಈಗ ಅಮೃತ ಕಾಲದಲ್ಲಿ ಚೀತಾ ಸಂತತಿಯನ್ನು ಬೆಳೆಸುವ ಸದವಕಾಶ ಬಂದಿದೆ’ ಎಂದು ಮೋದಿ ಹೇಳಿದ್ದಾರೆ.

‘ನಮ್ಮ ಮಿತ್ರ ರಾಷ್ಟ್ರ ನಮೀಬಿಯಾ ಮತ್ತು ಅಲ್ಲಿನ ಸರ್ಕಾರಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ’ ಎಂದು ಮೋದಿ ಅವರು ಹೇಳಿದರು.

ಚೀತಾಗಳು ನಮ್ಮ ಅತಿಥಿಗಳು. ಕುನೊ ರಾಷ್ಟ್ರೀಯ ಉದ್ಯಾನವನ್ನು ಅವು ತಮ್ಮ ಮನೆಯನ್ನಾಗಿ ಮಾಡಿಕೊಳ್ಳಲು ಕೆಲವು ತಿಂಗಳ ಸಮಯಾವಕಾಶವನ್ನು ಕೊಡಬೇಕು ಎಂದು ಮೋದಿ ಹೇಳಿದರು.

ಯುಪಿಎ ಅವಧಿಯಲ್ಲಿ ಯೋಜನೆ ಆರಂಭ: ಜೈರಾಮ್‌

‘ಕಾಂಗ್ರೆಸ್‌ ಪಕ್ಷವು ನಡೆಸುತ್ತಿರುವ ಭಾರತವನ್ನು ಒಗ್ಗೂಡಿಸಿ ಯಾತ್ರೆಗೆ ಸಿಕ್ಕ ಭಾರಿ ಯಶಸ್ಸಿನಿಂದ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಚೀತಾಗಳನ್ನು ಉದ್ಯಾನಕ್ಕೆ ಬಿಡುವ ಕಾರ್ಯಕ್ರಮವನ್ನು ಮೋದಿ ಅವರು ನಡೆಸಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಹೇಳಿದ್ದಾರೆ.

‘ಆಳ್ವಿಕೆ ಎಂಬುದು ಹಿಂದಿನ ಸರ್ಕಾರಗಳು ಮಾಡಿದ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು ಎಂಬುದು ಮೋದಿ ಅವರಿಗೆ ಅರ್ಥವೇ ಆಗುವುದಿಲ್ಲ ಎಂಬುದಕ್ಕೆ ಚೀತಾ ಯೋಜನೆಯು ಇತ್ತೀಚಿನ ಪುರಾವೆ. ಚೀತಾ ಯೋಜನೆಯು ಯುಪಿಎ ಅವಧಿಯಲ್ಲಿಯೇ ಆರಂಭವಾಗಿದೆ.2010ರ ಏಪ್ರಿಲ್‌ 25ರಂದು ಚೀತಾ ಯೋಜನೆಗಾಗಿ ನಾನು ಕೇಪ್‌ಟೌನ್‌ಗೆ ಹೋಗಿದ್ದೆ’ ಎಂದು ಜೈರಾಮ್‌ ನೆನಪಿಸಿಕೊಂಡಿದ್ದಾರೆ.

ಪನ್ನಾ ಮತ್ತು ಸಾರಿಸ್ಕಾ ರಾಷ್ಟ್ರೀಯ ಉದ್ಯಾನಗಳಿಗೆ ಹುಲಿಗಳ ಸ್ಥಳಾಂತರದ ಮೊದಲ ಯೋಜನೆ 2009–11ರ ಅವಧಿಯಲ್ಲಿ ನಡೆದಿತ್ತು. ಆಗ, ಇದು ಯಶಸ್ವಿ ಆಗದು ಎಂದು ಹಲವರು ಅಪಸ್ವರ ಎತ್ತಿದ್ದರು. ಆದರೆ, ಆ ಯೋಜನೆ ಯಶಸ್ವಿಯಾಗಿದೆ. ಚೀತಾ ಯೋಜನೆ ಆರಂಭ ಆದಾಗಲೂ ಇದೇ ರೀತಿಯ ಮಾತು ಕೇಳಿ ಬಂದಿತ್ತು ಎಂದು ಜೈರಾಮ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT