ಗುರುವಾರ , ಜನವರಿ 21, 2021
18 °C

ಡಿ.10ರಂದು ಹೊಸ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಡಿಸೆಂಬರ್ 10 ಗುರುವಾರದಂದು ಹೊಸ ಸಂಸತ್ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ರಾಜಧಾನಿ ನವದೆಹಲಿಯಲ್ಲಿ ತಲೆ ಎತ್ತಲಿರುವ ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಹಾಗೂ 'ಭೂಮಿ ಪೂಜೆ'ಯನ್ನು ನೆರವೇರಿಸಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶನಿವಾರದಂದು ಮಾಹಿತಿ ನೀಡಿದ್ದಾರೆ.

ಹೊಸ ಸಂಸತ್ತಿನ ಕಟ್ಟಡ ನಿರ್ಮಾಣ ಕಾಮಗಾರಿಯು ಡಿಸೆಂಬರ್‌ನಲ್ಲಿ ಆರಂಭವಾಗಲಿದ್ದು, 2022 ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೂತನ ಕಟ್ಟಡವು ಸರಿ ಸುಮಾರು 60,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ. ಇದು ಪ್ರಸ್ತುತ ಸ್ವಾಗತ, ತಡೆ ಗೋಡೆ ಹಾಗೂ ಇತರ ತಾತ್ಕಾಲಿಕ ರಚನೆಗಳನ್ನು ಹೊಂದಿರುವ ಪಾರ್ಲಿಮೆಂಟ್ ಹೌಸ್ ಎಸ್ಟೇಟ್ ಪ್ಲಾಟ್ ಸಂಖ್ಯೆ 118ರಲ್ಲಿ ನೆಲೆಗೊಳ್ಳಲಿದೆ.

ನೂತನ ಭವನವು ಸಂಸತ್ತಿನ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಕಚೇರಿಗಳನ್ನು ಹೊಂದಿರುತ್ತದೆ. ಅಲ್ಲದೆ ಕಾಗದ ರಹಿತ ಕಚೇರಿ ರಚಿಸುವುದರ ಭಾಗವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಹೊಂದಿರುತ್ತದೆ.

ಹೊಸ ಸಂಸತ್ತಿನಲ್ಲಿ ಭವ್ಯವಾದ ಸಂವಿಧಾನ ಸಭಾಂಗಣ...
ಭಾರತ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಲುವಾಗಿ ಹೊಸ ಸಂಸತ್ತಿನಲ್ಲಿ ಭವ್ಯವಾದ ಸಂವಿಧಾನ ಸಭಾಂಗಣವನ್ನು ರಚಿಸಲಾಗುವುದು. ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಅನೇಕ ಸಮಿತಿ ಕೊಠಡಿಗಳು, ಡೈನಿಂಗ್ ಮತ್ತು ಪಾರ್ಕಿಂಗ್ ಪ್ರದೇಶವನ್ನು ಹೊಂದಿರುತ್ತದೆ.

ಹೊಸ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನ ಹಾಗೂ ರಾಜ್ಯಸಭೆಯ ಮೇಲ್ಮನೆ ಸದಸ್ಯರಿಗೆ 384 ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ. ಭವಿಷ್ಯದಲ್ಲಿ ಉಭಯ ಸದನಗಳ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಆಸನ ಸಾಮರ್ಥ್ಯವನ್ನು ಒದಗಿಸಲಾಗಿದೆ.

ಈಗ ಅಸ್ತಿತ್ವದಲ್ಲಿರುವ ಕಟ್ಟಡವು ಬ್ರಿಟಿಷ್ ಯುಗದ ಕಟ್ಟಡವಾಗಿದ್ದು, ಎಡ್ವಿನ್ ಲ್ಯೂಟನ್ಸ್ ಹರ್ಬಟ್ ಬೇಕರ್ ವಿನ್ಯಾಸಗೊಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು