ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಲೋಪ: ಪಂಜಾಬ್ ಸರ್ಕಾರದಿಂದ ಎಫ್‌ಐಆರ್– ಫಿರೋಜ್‌ಪುರದಲ್ಲಿ ಕೇಂದ್ರ ತಂಡ

Last Updated 7 ಜನವರಿ 2022, 15:13 IST
ಅಕ್ಷರ ಗಾತ್ರ

ಚಂಡೀಗಡ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫಿರೋಜ್‌ಪುರ ಭೇಟಿಯ ಸಂದರ್ಭದಲ್ಲಿ ಸಂಭವಿಸಿದ ಭದ್ರತೆಯ 'ಗಂಭೀರ ಲೋಪ' ಗಳ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ತಂಡವು ಶುಕ್ರವಾರ ಪಟ್ಟಣವನ್ನು ತಲುಪಿದೆ. ಈ ಮಧ್ಯೆ ಪಂಜಾಬ್ ಸರ್ಕಾರವು ಈ ಕುರಿತಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದೆ.

ಕೇಂದ್ರ ಗೃಹ ಸಚಿವಾಲಯವು ಗುರುವಾರ ರಚಿಸಿರುವ ಮೂವರು ಸದಸ್ಯರ ಸಮಿತಿಯು ಮೋದಿಯವರ ಜನವರಿ 5ರ ಭೇಟಿಯ ಸಂದರ್ಭದಲ್ಲಿ ನಡೆದ ಘಟನೆಗಳ ಅನುಕ್ರಮದ ಬಗ್ಗೆ ಸಂಪೂರ್ಣ ವಿವರಗಳನ್ನು ಕಲೆ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಂಜು ಕವಿದ ವಾತಾವರಣದ ನಡುವೆ ತಂಡವು ಹಿರಿಯ ಪಂಜಾಬ್ ಪೊಲೀಸ್ ಮತ್ತು ಅಧಿಕಾರಿಗಳೊಂದಿಗೆ ಬೆಳಿಗ್ಗೆ ಫಿರೋಜ್‌ಪುರ ಬಳಿಯ ಮೇಲ್ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕ್ಯಾಬಿನೆಟ್ ಸೆಕ್ರೆಟರಿಯಟ್ ಕಾರ್ಯದರ್ಶಿ (ಭದ್ರತೆ) ಸುಧೀರ್ ಕುಮಾರ್ ಸಕ್ಸೇನಾ ಮತ್ತು ಗುಪ್ತಚರ ಬ್ಯೂರೋದ ಜಂಟಿ ನಿರ್ದೇಶಕ ಬಲ್ಬೀರ್ ಸಿಂಗ್, ವಿಶೇಷ ಭದ್ರತಾ ಪಡೆಯ ಐಜಿ ಎಸ್ ಸುರೇಶ್ ಮತ್ತು ಇತರ ಇಬ್ಬರು ಸದಸ್ಯರನ್ನು ಸಮಿತಿ ಒಳಗೊಂಡಿದೆ.

ಘಟನೆ ಕುರಿತ ವರದಿಯನ್ನು ಆದಷ್ಟು ಬೇಗ ಸಲ್ಲಿಸುವಂತೆ ಸಮಿತಿಗೆ ಕೇಂದ್ರ ಸೂಚಿಸಿದೆ. ಹೀಗಾಗಿ, ತಂಡವು ವಿಚಾರಣೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗಳಲ್ಲಿನ ‘ಗಂಭೀರ ಲೋಪ’ಗಳ ಕುರಿತು ತನಿಖೆ ನಡೆಸಲು ಕೇಂದ್ರವು ಗುರುವಾರ ಮೂರು ಸದಸ್ಯರ ಸಮಿತಿಯನ್ನು ರಚಿಸಿತ್ತು,

ಭದ್ರತಾ ಲೋಪ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ತಂಡವು 45 ನಿಮಿಷ ಕಳೆದಿದೆ. ಬಳಿಕ ಸುಮಾರು 10 ಕಿ.ಮೀ ದೂರದಲ್ಲಿರುವ ಫಿರೋಜ್‌ಪುರದ ಬಿಎಸ್‌ಎಫ್ ಸೆಕ್ಟರ್ ಪ್ರಧಾನ ಕಚೇರಿಯಲ್ಲಿ, ಪ್ರಧಾನ ಮಂತ್ರಿ ಬೆಂಗಾವಲು ಪಡೆಯ ಭದ್ರತಾ ಹೊಣೆ ಹೊತ್ತಿದ್ದ ಹಿರಿಯ ಆಡಳಿತಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಕೇಂದ್ರ ತಂಡವು ಮಾತುಕತೆ ನಡೆಸಿದೆ.

ಮೂಲಗಳ ಪ್ರಕಾರ, ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದ ಕೇಂದ್ರ ತಂಡವು ಪ್ರಧಾನಿಯವರ ಭದ್ರತೆಗೆ ನಿಯೋಜನೆಗೊಂಡಿದ್ದವರು ಸೇರಿದಂತೆ ಹಲವು ಹಿರಿಯ ಪೊಲೀಸ್ ಮತ್ತು ಸ್ಥಳಿಯಾಡಳಿತದ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು ಎಂದು ತಿಳಿದು ಬಂದಿದೆ.

ಈ ಮಧ್ಯೆ, ಭದ್ರತಾ ಲೋಪದ ಬಗ್ಗೆ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಭದ್ರತಾ ಲೋಪಗಳ ಕುರಿತು ತನಿಖೆ ನಡೆಸಲು ತನ್ನದೇ ಆದ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿರುವುದಾಗಿ ರಾಜ್ಯ ಸರ್ಕಾರ ಪತ್ರದಲ್ಲಿ ಉಲ್ಲೇಖಿಸಿದೆ.

ತಿವಾರಿ ಅವರು ಬುಧವಾರ ನಡೆದ ಘಟನೆಗಳ ಅನುಕ್ರಮಕ್ಕೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡಿದ್ದಾರೆ ಎಂದು ರಾಜ್ಯದ ಅಧಿಕೃತ ಮೂಲಗಳು ತಿಳಿಸಿವೆ.

ಈ ಲೋಪದೋಷಗಳ ತನಿಖೆಗಾಗಿ ಪಂಜಾಬ್ ಸರ್ಕಾರ ಗುರುವಾರ ಇಬ್ಬರು ಸದಸ್ಯರ ಸಮಿತಿಯನ್ನು ಪ್ರಕಟಿಸಿತ್ತು. ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಬುಧವಾರ ಮೋದಿ ಅವರ ಬೆಂಗಾವಲು ಪಡೆಯನ್ನು ತಡೆದ ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬುಧವಾರ ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿಯವರ ಬೆಂಗಾವಲು ಪಡೆ ಫ್ಲೈಓವರ್‌ನಲ್ಲಿ ಸಿಕ್ಕಿಹಾಕಿಕೊಂಡಿತು. ನಂತರ ಪ್ರಧಾನಿ ರ್‍ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪಂಜಾಬ್‌ನಿಂದ ಹಿಂದಿರುಗಿದ್ದರು.

ಘಟನೆ ಕುರಿತಂತೆ ತಕ್ಷಣ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯವು ಸೂಚಿಸಿತ್ತು. ಪ್ರಧಾನಿ ಭೇಟಿಯ ಸಮಯದಲ್ಲಿ ಭದ್ರತಾ ಕಾರ್ಯವಿಧಾನದ ಇಂತಹ ಲೋಪವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಅವುಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT