‘ಲೈಂಗಿಕ ಕಾರ್ಯಕರ್ತರೊಂದಿಗೆ ಘನತೆಯಿಂದ ನಡೆದುಕೊಳ್ಳಿ’

ನವದೆಹಲಿ: ಲೈಂಗಿಕ ಕಾರ್ಯಕರ್ತರನ್ನು ಮೌಖಿಕ ಹಾಗೂ ದೈಹಿಕವಾಗಿ ನಿಂದಿಸಬಾರದು ಮತ್ತು ಅವರೊಂದಿಗೆ ಘನತೆಯಿಂದ ನಡೆದುಕೊಳ್ಳಬೇಕು ಎಂದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
‘ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಲಾಗಿರುವ ಸಾಂವಿಧಾನಿಕ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ್ ರಾವ್, ಬಿ.ಆರ್ ಗವಾಯಿ ಮತ್ತು ಎ.ಎಸ್ ಬೊಪ್ಪಣ್ಣ ಅವರನ್ನೊಳಗೊಂಡ ಪೀಠವು ಸೂಚಿಸಿದೆ.
‘ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯಾವುದೇ ಲೈಂಗಿಕ ಕಾರ್ಯಕರ್ತೆಗೆ ಕಾನೂನಿನ ಪ್ರಕಾರ ತಕ್ಷಣವೇ ವೈದ್ಯಕೀಯ ನೆರವು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು’ ಎಂದೂ ಪೀಠ ಹೇಳಿದೆ.
ರಕ್ಷಣಾ ಕಾರ್ಯಾಚರಣೆ, ಬಂಧನ ಮತ್ತು ದಾಳಿ ಸಂಬಂಧಿತ ವಿಷಯಗಳನ್ನು ಪ್ರಸಾರ ಮಾಡುವಾಗ ಲೈಂಗಿಕ ಕಾರ್ಯಕರ್ತೆಯರ ಗುರುತನ್ನು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಮಾರ್ಗಸೂಚಿ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಪತ್ರಿಕಾ ಮಂಡಳಿಗೆ ಸೂಚಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.