ಬುಧವಾರ, ಡಿಸೆಂಬರ್ 8, 2021
28 °C
ಮಾಜಿ ರಾಷ್ಟ್ರಪತಿಗೆ ಅಂತಿಮ ನಮನ ಸಲ್ಲಿಸಿದ ವಿವಿಧ ಗಣ್ಯರು

‘ಭಾರತ ರತ್ನ’ ಪ್ರಣವ್‌ಗೆ ಅಂತಿಮ ವಿದಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಂತ್ಯ ಸಂಸ್ಕಾರವನ್ನು ಇಲ್ಲಿನ ಲೋಧಿ ರಸ್ತೆಯಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಮಂಗಳವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಸೋಮವಾರ ಸಂಜೆ ನಿಧನಹೊಂದಿದ್ದ ಪ್ರಣವ್‌ ಅವರ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ವಾಹನದಲ್ಲಿ ಚಿತಾಗಾರಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಅವರ ಶರೀರದ ಮೇಲೆ ತ್ರಿವರ್ಣ ಧ್ವಜವನ್ನು ಹೊದಿಸಲಾಗಿತ್ತು.

ಕೋವಿಡ್‌–19 ಮುನ್ನೆಚ್ಚರಿಕೆಯ ಕ್ರಮವಾಗಿ ಪಿಪಿಇ ಕಿಟ್‌ಗಳನ್ನು ಧರಿಸಿದ್ದ ಅವರ ಕುಟುಂಬದವರು ಹಾಗೂ ಬಂಧುಗಳು ಅಗಲಿದ ನಾಯಕನಿಗೆ ಅಂತಿಮ ಗೌರವಗಳನ್ನು ಸಲ್ಲಿಸಿದರು.

ಪ್ರಣವ್‌ ಅವರ ಪುತ್ರ ಅಭಿಜಿತ್‌ ಮುಖರ್ಜಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು.

ಅದಕ್ಕೂ ಮುನ್ನ, ಪ್ರಣವ್‌ ಅವರ 10, ರಾಜಾಜಿ ಮಾರ್ಗದಲ್ಲಿರುವ ನಿವಾಸಕ್ಕೆ ತೆರಳಿ ನೂರಾರು ಮಂದಿ ಗಣ್ಯರು, ಬಂಧುಗಳು, ರಾಜಕಾರಣಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಅಂತಿಮ ನಮನಗಳನ್ನು ಸಲ್ಲಿಸಿದರು.

ಮೋದಿ ಅಂತಿಮ ನಮನ: ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು
ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪನಮನ ಸಲ್ಲಿಸಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ, ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ, ನೌಕಾಪಡೆ ಮುಖ್ಯಸ್ಥ ಕರಂಬಿರ್ ಸಿಂಗ್ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಮಂಗಳವಾರ ನಡೆದ ಕೆಂದ್ರದ ಸಚಿವ ಸಂಪುಟ ಸಭೆಯಲ್ಲಿ ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಪ್ರಣವ್‌ ಅವರಿಗೆ ಗೌರವ ಸಲ್ಲಿಸಲಾಯಿತು.

ಮನೆಯಲ್ಲಿ ಸ್ಮಾರಕ

‘ಪಶ್ಚಿಮ ಬಂಗಾಳದ ಜಂಗಿಪುರದಲ್ಲಿರುವ ನಮ್ಮ ಮನೆಯ ಒಂದು ಮಹಡಿಯನ್ನು ಪ್ರಣವ್‌ ಮುಖರ್ಜಿ ಅವರ ಸ್ಮರಣಾರ್ಥವಾಗಿ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯವಾಗಿ ಪರಿವರ್ತಿಸಲು ಯೋಜನೆ
ರೂಪಿಸಲಾಗುತ್ತಿದೆ’ ಎಂದು ಪ್ರಣವ್‌ ಅವರ ಪುತ್ರ ಅಭಿಜಿತ್‌ ಮುಖರ್ಜಿ ತಿಳಿಸಿದ್ದಾರೆ.

‘ಜಂಗಿಪುರದಲ್ಲಿ ನಮ್ಮ ತಂದೆ ಕಟ್ಟಿಸಿರುವ ಮನೆಯ ಒಂದು ಮಹಡಿಯಲ್ಲಿ ಅವರು ಬಳಸುತ್ತಿದ್ದ ವಸ್ತುಗಳನ್ನು ವಿಶೇಷವಾಗಿ ಪುಸ್ತಕಗಳು, ಅವರು ಪಡೆದಿದ್ದ ಉಡುಗೊರೆಗಳು ಮುಂತಾದವುಗಳನ್ನು ಸಂಗ್ರಹಿಸಿಡಲು ಯೋಜನೆ ರೂಪಿಸಿದ್ದೇನೆ. ಪ್ರಣವ್‌ ಅವರ ಚಿತ್ರವನ್ನು ಹೊಂದಿರುವ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಬೇಕು ಎಂಬುದು ನಮ್ಮ ಬಯಕೆ. ಸರ್ಕಾರ ಈ ಮನವಿಯನ್ನು ಗೌರವಿಸಬಹುದು ಎಂದು ಭಾವಿಸಿದ್ದೇನೆ’ ಎಂದು ಅಭಿಜಿತ್‌ ಹೇಳಿದ್ದಾರೆ.

ಬೈಡನ್‌ ಸಂತಾಪ

ಪ್ರಣವ್ ಮುಖರ್ಜಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು, ‘ಜಾಗತಿಕ ಸವಾಲುಗಳನ್ನು ಭಾರತ ಮತ್ತು ಅಮೆರಿಕ ಒಟ್ಟಾಗಿ ಎದುರಿಸುವುದರ ಪ್ರಾಮುಖ್ಯತೆಯನ್ನು ಪ್ರಣವ್‌ ಅವರು ಮನಗಂಡಿದ್ದರು’ ಎಂದಿದ್ದಾರೆ.

ಅಮೆರಿಕದ ಇತರ ಪ್ರಮುಖ ನಾಯಕರು ಹಾಗೂ ಸಂಘಟನೆಗಳು ಕೂಡಾ ಪ್ರಣವ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು