ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರೌಪದಿ ಮುರ್ಮ ಮತ ಗಳಿಕೆ ಹೆಚ್ಚಿಸಿದ ವಿರೋಧ ಪಕ್ಷಗಳ 95 ಶಾಸಕರ ಅಡ್ಡ ಮತದಾನ

Last Updated 22 ಜುಲೈ 2022, 13:24 IST
ಅಕ್ಷರ ಗಾತ್ರ

ಶೇಕಡ 64.03ರಷ್ಟು ಮತಗಳನ್ನು ಪಡೆಯುವ ಮೂಲಕ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ದೇಶದ 15ನೇ ರಾಷ್ಟ್ರಪತಿ ಹುದ್ದೆಗೆ ಏರಿದ್ದಾರೆ. ದ್ರೌಪದಿ ಮುರ್ಮು ಅವರ ಮತ ಗಳಿಕೆ ಹೆಚ್ಚಲು ವಿಪಕ್ಷಗಳ ಶಾಸಕರ ಅಡ್ಡ ಮತದಾನ ಪ್ರಮುಖ ಕಾರಣವಾಗಿದೆ. ವಿರೋಧ ಪಕ್ಷದ ಪಾಳಯದಿಂದ ಕನಿಷ್ಠ 95 ಶಾಸಕರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಸ್ಸಾಂನಿಂದ ಅತಿ ಹೆಚ್ಚು ಸುಮಾರು ವಿರೋಧ ಪಕ್ಷಗಳ ಎರಡು ಡಜನ್‌ನಷ್ಟು ಶಾಸಕರು ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ತಲಾ ಸುಮಾರು 15 ಶಾಸಕರು ಸಹ ಮುರ್ಮು ಅವರಿಗೆ ಮತದಾನ ಮಾಡಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ, ಕೇರಳದಿಂದ ಮುರ್ಮುಗೆ ಯಾವುದೇ ಮತ ಬರುವ ನಿರೀಕ್ಷೆ ಇರಲಿಲ್ಲ. ಏಕೆಂದರೆ ಎಲ್ಲಾ ಶಾಸಕರು ವಿರೋಧ ಪಕ್ಷಗಳ ಒಕ್ಕೂಟದಲ್ಲಿರುವ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ ಸೇರಿದವರಾಗಿದ್ದಾರೆ. ಆದರೆ, ಕೇರಳದಲ್ಲಿಯೂ ಒಬ್ಬ ಶಾಸಕ ಮುರ್ಮುಗೆ ಮತ ಹಾಕಿದ್ದಾರೆ. ಮಣಿಪುರದಲ್ಲಿ ಒಂದೇ ಒಂದು ಅಡ್ಡ ಮತದಾನ ಸಿನ್ಹಾ ಪರ ಆಗಿದೆ.

ವಿರೋಧ ಪಕ್ಷಗಳ 17 ಸಂಸದರು ಮತ್ತು 126 ಶಾಸಕರು ಮುರ್ಮು ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಅಸ್ಸಾಂನಲ್ಲಿ ಎನ್‌ಡಿಎ ಅಭ್ಯರ್ಥಿಯು ಕೇವಲ 78 ಮತ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ, ಅಲ್ಲಿ ಅವರಿಗೆ 104 ಮತ ಬಂದಿವೆ. ವಿರೋಧ ಪಕ್ಷಗಳ ಕನಿಷ್ಠ 26 ಶಾಸಕರು ಮುರ್ಮು ಅವರಿಗೆ ಮತ ಹಾಕಿದ್ದಾರೆ.

ಮಹಾರಾಷ್ಟ್ರದಲ್ಲಿ ಮುರ್ಮು ಪರವಾಗಿ ವಿರೋಧ ಪಕ್ಷಗಳ ಶಾಸಕರಿಂದ 15 ಮತಗಳು ಬಿದ್ದಿವೆ. ಅಲ್ಲಿ ಮುರ್ಮು ಅವರು 181 ಮತಗಳನ್ನು ಪಡೆದಿದ್ದು, ಇದರಲ್ಲಿ ಸಿಎಂ ಏಕನಾಥ ಶಿಂದೆ ವಿಶ್ವಾಸಮತಯಾಚನೆ ವೇಳೆ ಬಿದ್ದಿದ್ದಕ್ಕಿಂತ 15 ಮತಗಳು ಹೆಚ್ಚಾಗಿವೆ.

ಮಧ್ಯಪ್ರದೇಶದಲ್ಲೂ ವಿಪಕ್ಷಗಳಿಂದ 15 ಮತ ದ್ರೌಪದಿ ಮುರ್ಮು ಪಾಲಾಗಿವೆ. ಅಲ್ಲಿ ಎನ್‌ಡಿಎ ಅಭ್ಯರ್ಥಿಯು 131 ಮತ ಗಳಿಸುವ ನಿರೀಕ್ಷೆ ಇತ್ತು. ಆದರೆ, 146 ಮತಗಳು ಬಿದ್ದಿವೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಧ್ಯಪ್ರದೇಶದ ಬುಡಕಟ್ಟು ಸಮುದಾಯದ ಶಾಸಕರಿಗೆ ಬಿಜೆಪಿಯಿಂದ ಹಣದ ಆಮಿಷ ಒಡ್ಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ತಮಗೆ ಆಮಿಷ ಒಡ್ಡಿದ್ದಾಗಿ 10 ಶಾಸಕರು ಹೇಳಿದ್ದರು.

ಬಿಹಾರದಲ್ಲೂ ವಿಪಕ್ಷಗಳ ಅರ್ಧ ಡಜನ್ ಶಾಸಕರು ಮುರ್ಮು ಪರ ಮತ ಹಾಕಿದ್ದಾರೆ. ಬಿಹಾರ ವಿಧಾನಭೆಯಲ್ಲಿ ಎನ್‌ಡಿಎ ಬಲ 127 ಆಗಿದ್ದು, 133 ಮತಗಳು ಬಂದಿವೆ.

ಗುಜರಾತ್‌ನಲ್ಲೂ ಮುರ್ಮು ಅವರ ಪರವಾಗಿ ಅಡ್ಡ ಮತದಾನವಾಗಿದೆ. ವಿರೋಧ ಪಕ್ಷಗಳ ಕನಿಷ್ಠ 10 ಶಾಸಕರು ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಅಲ್ಲಿ 111 ಬಿಜೆಪಿ ಶಾಸಕರಿದ್ದು, ಮುರ್ಮು ಅವರಿಗೆ 121 ಮತಗಳು ಬಿದ್ದಿವೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ಕಾಂಗ್ರೆಸ್ ಮತ್ತು ಬೆಂಬಲಿತ ಪಕ್ಷಗಳ ಶಾಸಕರು ಮುರ್ಮುಗೆ ಮತ ಹಾಕದಂತೆ ತಡೆಯುವಲ್ಲಿ ಯಶಸ್ವಿಯಾದರೆ, ಛತ್ತೀಸ್‌ಗಢದಲ್ಲಿ ಕನಿಷ್ಠ ಒಬ್ಬ ಶಾಸಕರು ಮುರ್ಮು ಪರ ಮತ ಹಾಕಿರುವುದು ತಿಳಿದು ಬಂದಿದೆ.

ಹರಿಯಾಣದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೆನ್ ಭಾರೀ ಹೋರಾಟ ನಡೆಸಿ ಸೋತಿದ್ದರು. ಅಲ್ಲಿ 30 ಕಾಂಗ್ರೆಸ್ ಶಾಸಕರು ಸಿನ್ಹಾಗೆ ಮತ ಹಾಕಿದ್ದಾರೆ. ಆದರೆ, ಬಿಜೆಪಿಗೆ ಸೇರಲು ಮುಂದಾಗಿರುವ ಕುಲದೀಪ್ ಬಿಷ್ಣೋಯಿ, ಮುರ್ಮು ಅವರಿಗೆ ಮತ ಹಾಕಿದ್ದಾರೆ.

ಉತ್ತರ ಪ್ರದೇಶದಲ್ಲಿ, ‘ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ’ದ (ಎಸ್‌ಬಿಎಸ್‌ಪಿ) ಕನಿಷ್ಠ ಆರು ಶಾಸಕರು ಮುರ್ಮು ಪರ ಮತದಾನ ಮಾಡಿದ್ದಾರೆ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT