ಬುಧವಾರ, ಮೇ 18, 2022
28 °C
‘ಚೌರಿ ಚೌರಾ‘ ಹೋರಾಟದ ಶತಮಾನೋತ್ಸವ

‌ಮತ ಬ್ಯಾಂಕ್ ಆಧರಿತ ಬಜೆಟ್‌ ಪರಿಕಲ್ಪನೆ ಬದಲು: ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗೋರಖ್‌ಪುರ(ಉತ್ತರ ಪ್ರದೇಶ): ‘ಹಿಂದಿನ ಸರ್ಕಾರಗಳು ತಮ್ಮ ಆಡಳಿತದ ಅವಧಿಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಬಜೆಟ್‌ ಅನ್ನು ಮಾಧ್ಯಮವಾಗಿ ಬಳಸಿಕೊಂಡಿದ್ದರು. ಆದರೆ, ನಮ್ಮ ಸರ್ಕಾರ ಆ ವಿಧಾನವನ್ನೇ ಬದಲಾಯಿಸಿದೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಹೋರಾಟ ‘ಚೌರಿ ಚೌರಾ’ದ 100ನೇ ವರ್ಷಾ ಚರಣೆಯ ಕಾರ್ಯಕ್ರಮಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪರೋಕ್ಷವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿ ಮಾತನಾಡಿದರು.

‘ನಮ್ಮ ದೇಶದಲ್ಲಿ ದಶಕಗಳಿಂದ ಬಜೆಟ್‌ ಅರ್ಥವೇ ಬದಲಾಗಿತ್ತು. ಬಜೆಟ್‌ ಎಂದರೆ ಯಾರ ಹೆಸರಿನಲ್ಲಿ ಏನು ಘೋಷಣೆಯಾಗಿತ್ತೋ, ಅದನ್ನು ಪೂರೈಸುವುದು ಎಂಬಂತಾಗಿತ್ತು. ಆದರೆ, ಈಗ ನಮ್ಮ ಸರ್ಕಾರ ಆ ಚಿಂತನೆ, ಅರ್ಥವನ್ನೇ ಬದಲಿಸಿದೆ‘ ಎಂದು ಪ್ರಧಾನಿ ಹೇಳಿದರು.

ಇದೇ ಸಮಾರಂಭದಲ್ಲಿ ‘ಚೌರಿ ಚೌರಾ‘ ಹೋರಾಟದ ಸ್ಮರಣೆಗಾಗಿ ಹೊರತಂದಿರುವ ಅಂಚೆ ಚೀಟಿಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು.

ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮಹಾತ್ಮ ಗಾಂಧಿಯವರು 1922ರಲ್ಲಿ ದೇಶದಾದ್ಯಂತ ಮಹಾತ್ಮ ಗಾಂಧಿ ಅವರು ಅಸಹಕಾರ ಚಳವಳಿ ಆರಂಭಿಸಿದ್ದರು. ಇದೇ ವೇಳೆ ಚೌರಿಚೌರಾದಲ್ಲಿ ನಡೆದಿದ್ದ ಚಳವಳಿಯಲ್ಲಿ ಭಾಗವಹಿಸಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದರು. ಘಟನೆಯಲ್ಲಿ ಕೆಲ ಹೋರಾಟಗಾರರ ಸಾವನ್ನಪ್ಪಿದರು. ಆಗ, ರೊಚ್ಚಿಗೆದ್ದ ಹೋರಾಟಗಾರರು ಚೌರಿಚೌರಾ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ, ಅದಕ್ಕೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ, ಠಾಣೆಯಲ್ಲಿದ್ದ ಹಲವರು ಮೃತಪಟ್ಟಿದ್ದರು.

ಚೌರಿ ಚೌರಾ ಪೊಲೀಸರ ಹತ್ಯೆಯ ಪರಿಣಾಮವಾಗಿ ನೂರಾರು ಪ್ರತಿಭಟನಕಾರರನ್ನು ಬಂಧಿಸಲಾಯಿತು. ಅವರಲ್ಲಿ 228 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಯಿತು. ಎಂಟು ತಿಂಗಳ ವಿಚಾರಣೆ ನಡೆಯಿತು. ಬಂಧಿತರಲ್ಲಿ ಆರು ಮಂದಿ ಸಾವನ್ನಪ್ಪಿದರು. 172 ಮಂದಿಯನ್ನು ಗಲ್ಲಿಗೇರಿಸಲು ಆದೇಶಿಸಲಾಯಿತು. 

172 ಮಂದಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಪರಿಶೀಲಿಸಿದ ಅಲಹಾಬಾದ್ ಹೈಕೋರ್ಟ್ ಅಂತಿಮವಾಗಿ, 1923ರ ಏಪ್ರಿಲ್ 19 ರಂದು ಅಪರಾಧಿಗಳಿಗೆ ಶಿಕ್ಷೆಯನ್ನು ದೃಢಪಡಿಸಿತು. ಉಳಿದ 110 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಇತರರಿಗೆ ದೀರ್ಘ ಜೈಲು ಶಿಕ್ಷೆ ವಿಧಿಸಿತು. ಅವರನ್ನೆಲ್ಲ ಪೋರ್ಟ್ ಬ್ಲೇರ್‌ ಜೈಲಿನಲ್ಲಿ ಇಡಲಾಯಿತು.

ಇದನ್ನೂ ಓದಿ... ಪ್ರಲಾಪ ಸಾಕು ಮಾಡಿ: ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ತರಾಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು